ಕೊರೋನಾ ಸಾಂಕ್ರಾಮಿಕ ಸುಮಾರು ಹನ್ನೊಂದು ತಿಂಗಳುಗಳ ಕಾಲ ಎಲ್ಲರೂ ಕಾತರ- ಆತಂಕಗಳಿಂದ ಕಾಯುವಂತೆ ಮಾಡಿತು. ಶೈಕ್ಷಣಿಕ ಚಟುವಟಿಕೆಗಳೂ ಸ್ತಬ್ಧವಾಗಿ ಶಾಲಾಕಾಲೇಜುಗಳು ರಂಗು ಕಳೆದುಕೊಂಡವು. ಈಗ ತರಗತಿ ಪಾಠಗಳೇನೋ ಆರಂಭವಾಗಿವೆ. ಆದರೆ ಸಮಸ್ಯೆಗಳು ಮುಂದುವರಿದಿವೆ.

 

ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್ ಫೋನ್ ಕಂಡರೆ ಸಾಕು ಪಾಲಕರನ್ನು ಕರೆಸಿ ಬೈಯುತ್ತಿದ್ದ ಶಿಕ್ಷಕರು ತರಗತಿಗಳಿಗೆ ಹಾಜರಾಗದಿದ್ದಾಗ ಕರೆ ಮಾಡಿ ಕರೆಯುವಂತಾಗಿದೆ. ಆಫ್‌ಲೈನ್‌ ಕ್ಲಾಸ್‌ ಗೆ ಬರದಿದ್ದರೂ ಪರವಾಗಿಲ್ಲ, ಆನ್‌ಲೈನ್‌ಗಾದರೂ ಬನ್ನಿ ಎಂದು ಅಕ್ಷರಶಃ ಗೋಗರೆಯುವಂತಾಗಿದೆ. ಉಹುಂ…ಇಷ್ಟಾದರೂ ಇನ್ನೂ ಹಲವರು ಕೊವಿಡ್‌ ಮೂಡ್‌ನಿಂದ ಹೊರಬರೋ ಲಕ್ಷಣ ಕಾಣುತ್ತಿಲ್ಲ.

ಇನ್ನು ಕಾಲೇಜಿಗೆ ಬಂದವರದ್ದೊಂದು ಪಾಡು. ಮಾಸ್ಕ್‌ ಧರಿಸುವುದು ಕಡ್ಡಾಯವಾಗಿರೋದ್ರಿಂದ ಮುಖ ಪರಿಚಯವೇ ಆಗುತ್ತಿಲ್ಲ. ಪಕ್ಕದಲ್ಲಿ ಕುಳಿತಿರುವವರು ಯಾರು ಎಂದು ತಿಳಿಯದಂತಾಗಿದೆ. ಒಟ್ಟಿಗೆ ಕೂತು ಹಂಚಿಕೊಂಡು ತಿನ್ನುತ್ತಿದ್ದ ಊಟವನ್ನು ಎಲ್ಲೋ ದೂರದಲ್ಲಿ ಕುಳಿತು ಒಂಟಿಯಾಗಿ ತಿನ್ನುವಂತಾಗಿದೆ. ಬಸ್‌ ಪಾಸ್‌ ಸಮಸ್ಯೆ, ಟ್ರೈನಿಲ್ಲದ ಗೋಳು, ಹಾಸ್ಟೆಲ್‌- ಪಿಜಿ ಸಮಸ್ಯೆಗಳು ವಿದ್ಯಾರ್ಥಿಗಳ ಅಮಿತೋತ್ಸಾಹಕ್ಕೆ ಕೊಡಲಿ ಏಟು ನೀಡಿವೆ.

ಬೋಧಕರ ಪರಿಸ್ಥಿತಿಯಂತೂ ಹೇಳತೀರದು. ಆಫ್ಲೈನ್‌-ಆನ್ಲೈನ್ ಎರಡರಲ್ಲೂ ಪಾಠ ಮಾಡಬೇಕಾಗಿದೆ. ವಿದ್ಯಾರ್ಥಿಗಳು ಮೊಬೈಲ್‌ ಹಿಡಿದು ಕಾರಿಡಾರ್‌ನಲ್ಲಿ ಓಡಾಡಿದರೂ ಏನೂ ಹೇಳೋಹಾಗಿಲ್ಲ. ಕೆಲವರಂತೂ ಆನ್ಲೈನ್‌ ʼಜಾಯ್ನ್‌ʼ ಆಗಿ ಮೊಬೈಲ್‌ ಜೇಬಲ್ಲಿಟ್ಟು ಪೇಟೆ ಸುತ್ತುತ್ತಾರೆ. ಎಷ್ಟಾದ್ರು ಹಾಜರಾತಿ ಕಡ್ಡಾಯವಲ್ಲ ನೋಡಿ! ಇವನ್ನೆಲ್ಲಾ ಕೊರೋನಾದ ಶಾಪ ನಮಗೆ ಚೆನ್ನಾಗೇ ನಾಟಿದೆ ಅನ್ನಿಸುತ್ತೆ.

 

ಶಂಕರ್ ಓಬಳಬಂಡಿ,
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

Share.

1 Comment

Leave A Reply