1971 ರಲ್ಲಿ ತೆರೆಕಂಡ ‘ಎನ್ನ ತಂಗಡಿ’ ಚಿತ್ರದೊಂದಿಗೆ ಪ್ರವರ್ಧಮಾನಕ್ಕೆ ಬಂದ ತುಳು ಚಿತ್ರರಂಗಕ್ಕೆ ಈಗ ಐವತ್ತರ ಹರೆಯ. ಮೊದಲ ನಲವತ್ತು ವರ್ಷಗಳಲ್ಲಿ ಕೇವಲ ನಲವತ್ತೈದು ಸಿನೆಮಾಗಳನ್ನಷ್ಟೇ ತಯಾರಿಸಿದ್ದ ಕೋಸ್ಟಲ್ ವುಡ್ ಕಳೆದ ಹತ್ತು ವರ್ಷಗಳಲ್ಲಿ ಅಮೋಘವಾಗಿ ಬೆಳೆದು ಅತ್ಯುತ್ತಮ ಚಿತ್ರಗಳನ್ನು ಸಿನಿರಸಿಕರಿಗೆ ನೀಡಿದೆ. ದಕ್ಷಿಣ ಕನ್ನಡ , ಉಡುಪಿ ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ತುಳು ಸಿನಿಮಾದ ಪ್ರದರ್ಶನ ಇಂದು ಬೆಂಗಳೂರು , ಮುಂಬೈ ಯಂತಹ ಮಹಾನಗರಿ ಮಾತ್ರವಲ್ಲದೆ ಹೊರದೇಶಗಳಲ್ಲೂ ಯಶಸ್ವಿ ಪ್ರದರ್ಶನಗಳನ್ನು ಕಾಣುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ.

ತುಳುಚಿತ್ರರಂಗ 50ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಈ ಪರ್ವಕಾಲದಲ್ಲಿ ಒಂದಷ್ಟು ತುಳು ಚಿತ್ರಗಳು ತೆರೆಗೆ ಬರಲು ಸಜ್ಜಾಗಿ ನಿಂತಿದೆ. ಕೆಲವೊಂದು ಸಿನೆಮಾಗಳಿಗಂತೂ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ತುಳುನಾಡಿನ ಜನ ಕಾತರತೆಯಿಂದ ಕಾಯುತ್ತಿರುವ ಸಿನೆಮಾಗಳಲ್ಲಿ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾವೂ ಒಂದು.

ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಸಿನಿಮಾ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿರಲು ಕಾರಣವೂ ಇದೆ. ‘ಒಂದು ಮೊಟ್ಟೆಯ ಕಥೆ’ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಹುಟ್ಟು ಹಾಕಿದ್ದ ಚಿತ್ರ. ಈ ಚಿತ್ರವನ್ನು ತಯಾರಿಸಿದ ತಂಡವೇ ಇದೀಗ 3 ವರ್ಷಗಳ ಬಳಿಕ ಮತ್ತೊಮ್ಮೆ ಫೀಲ್ಡಿಗಿಳಿದಿದೆ. ಈ ಬಾರಿ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಎನ್ನುವ ಹಾಸ್ಯದ ಜೊತೆಗೆ ಕೌಟುಂಬಿಕ ಕಥಾಹಂದರ ಹೊಂದಿರುವ ಸಿನಿಮಾವನ್ನು ಕನ್ನಡ ಹಾಗೂ ತುಳು ಭಾಷೆಯಲ್ಲಿ ತೆರೆಗೆ ತರಲು ಸಜ್ಜಾಗಿದೆ.
ರಾಹುಲ್ ಅಮೀನ್ ನಿರ್ದೇಶನದ ‘ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ’ ಸಿನಿಮಾದ ನಾಯಕನಟನಾಗಿ ವಿಜೆ ವಿನೀತ್ ಅಭಿನಯಿಸಿದ್ದಾರೆ.

ನಿಮಗೆಲ್ಲ ನೆನಪಿರಬಹುದು ,ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ನಾಯಕ ನಟನ ತಮ್ಮನಾಗಿ ರೊಮ್ಯಾಂಟಿಕ್ ಲುಕ್ ನಲ್ಲಿ ಕಾಣಿಸಿಕೊಂಡು ಕಾಲೇಜು ಲಲನೆಯರ ಸುತ್ತ ಸುತ್ತುವ ರೋಮಿಯೋ ಪಾತ್ರದಲ್ಲಿ ಅಭಿನಯಿಸಿ ನಮ್ಮೆಲ್ಲರ ಮುಖದಲ್ಲಿ ನಗುತರಿಸುವಂತೆ ನಟಿಸಿದ್ದವರು ಇದೇ ವಿನೀತ್.‘ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ’ ಸಿನಿಮಾದ ಮೂಲಕ ಪೂರ್ಣಪ್ರಮಾಣದಲ್ಲಿ ನಾಯಕನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ನಿರೂಪಕನಾಗಿ ಖ್ಯಾತಿ ಗಳಿಸಿರುವ ವಿನೀತ್, ತುಳು ಭಾಷೆಯ ಹಲವಾರು ಸಿನಿಮಾಗಳಲ್ಲಿ ಪ್ರಧಾನ ಹಾಗೂ ಪೋಷಕ ಪಾತ್ರದಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿರುವ ನಟ. ಇದೀಗ ವಿನೀತ್ ನಾಯಕನಟನಾಗಿರುವ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾ ತುಳು ಹಾಗೂ ಕನ್ನಡ ಭಾಷೆಯಲ್ಲಿ ತೆರೆ ಕಾಣಲಿದ್ದು ಹೊಸನಿರೀಕ್ಷೆ ಹುಟ್ಟಿಸಿದೆ.

ಮ್ಯಾಂಗೋ ಪಿಕಲ್ ಎಂಟರ್‌ಟೈನ್‌ಮೆಂಟ್ ಸಹಯೋಗದೊಂದಿಗೆ ವೈಭವ್ ಫ್ಲಿಕ್ಸ್ ಪ್ರಸ್ತುತಪಡಿಸುವ ಈ ಸಿನಿಮಾಕ್ಕೆ ಆನಂದ್ ಎನ್ ನಿರ್ಮಾಪಕರು. ಬಿ ಅಶೋಕ್ ಕುಮಾರ್, ಸೀತಾರಾಮ್ ಶೆಟ್ಟಿ, ಅಜಯ್ ಬಾಲಿಗಾ, ಸುಹಾನ್ ಪ್ರಸಾದ್, ಪವನ್ ಕುಮಾರ್, ನಿತಿನ್ ರಾಜ್ ಶೆಟ್ಟಿ ಮತ್ತು ಅರ್ಪಿತ್ ಅಡ್ಯಾರ್ ಸಹ-ನಿರ್ಮಾಪಕರಾಗಿದ್ದಾರೆ. ನಾಯಕಿಯ ಪಾತ್ರದಲ್ಲಿ ನಟಿ ಕರೀಷ್ಮಾ ಅಮೀನ್ ಅಭಿನಯಿಸಿದ್ದಾರೆ. ಯಶಾ ರವಿಶಂಕರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ತುಳುವಿನ ಖ್ಯಾತ ನಟರಾದ ನವೀನ್ ಡಿ ಪಡೀಲ್ , ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್ ಸೇರಿದಂತೆ ಸತೀಶ್ ಬಂದಲೆ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರೂಪಾ ವರ್ಕಾಡಿ, ಚೈತ್ರಾ ಶೆಟ್ಟಿ, ಮೆರ್ವಿನ್ ಶಿರ್ವಾ ಮತ್ತಿತರ ನಟರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾಕ್ಕೆ ‘ಪಡ್ಡಾಯಿ’ ಸಿನಿಮಾ ಖ್ಯಾತಿಯ ಪ್ರಸಾದ್ ಪಿ ಛಾಯಾಗ್ರಹಣವಿದೆ. ಜಾಕೋಬ್ ಜಾನ್ಸನ್ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಚಿತ್ರದ ಸಂಭಾಷಣೆಯನ್ನು ಗಿರ್ಗಿಟ್ ಸಿನಿಮಾ ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಸೃಜನ್ ಕುಮಾರ್ ತೋನ್ಸೆ ಅವರ ಸಂಗೀತ ನಿರ್ದೇಶನವಿದೆ.

Share.

Leave A Reply