ಸಿಂಗಾಪುರ: ಮುಸ್ಲಿಂ ಬಾಹುಳ್ಯದ ಕಾಶ್ಮೀರ ಕಣಿವೆಯಿಂದ ಹಿಂದುಗಳ ವಲಸೆ ಕುರಿತ ಬಾಲಿವುಡ್ ಸಿನೆಮ ‘ದಿ ಕಾಶ್ಮೀರ್ ಫೈಲ್ಸ್’ ಪ್ರದರ್ಶನವನ್ನು ನಿಷೇಧಿಸಲು ಸಿಂಗಾಪುರ ಸರಕಾರ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹಿಂದಿ ಭಾಷೆಯ ಈ ಸಿನೆಮ ಸಿಂಗಾಪುರದ ಚಲನಚಿತ್ರ ವರ್ಗೀಕರಣ ಮಾರ್ಗಸೂಚಿಯನ್ನು ಮೀರಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಘರ್ಷಣೆಯಲ್ಲಿ ಮುಸ್ಲಿಮರನ್ನು ಪ್ರಚೋದನಕಾರಿ ಮತ್ತು ಏಕಪಕ್ಷೀಯಯಾಗಿ ಚಿತ್ರಿಸಿರುವುದು ಮತ್ತು ಹಿಂದುಗಳು ಕಿರುಕುಳಕ್ಕೆ ಒಳಗಾದವರೆಂದು ಚಿತ್ರಿಸಿರುವುದರಿಂದ ಚಲನಚಿತ್ರವನ್ನು ವರ್ಗೀಕರಿಸಲು ನಿರಾಕರಿಸಲಾಗಿದೆ. ಈ ರೀತಿ ಚಿತ್ರಿಸಿರುವುದು ವಿಭಿನ್ನ ಸಮುದಾಯದ ಮಧ್ಯೆ ದ್ವೇಷವನ್ನು ಉಂಟು ಮಾಡುವ ಸಾಮರ್ಥ್ಯ ಹೊಂದಿದೆ ಮತ್ತು ನಮ್ಮ ಬಹುಜನಾಂಗೀಯ ಮತ್ತು ಬಹು ಧರ್ಮೀಯ ಸಮಾಜದಲ್ಲಿ ಸಾಮಾಜಿಕ ಒಗ್ಗಟ್ಟು ಮತ್ತು ಧಾರ್ಮಿಕ ಸಾಮರಸ್ಯವನ್ನು ಹಾಳು ಮಾಡುತ್ತವೆ ಎಂದು ಇನ್ಫೊಕಾಮ್ ಮೀಡಿಯಾ ಡೆವಲಪ್ಮೆಂಟ್ ಅಥಾರಿಟಿ ಹಾಗೂ ಸಿಂಗಾಪುರದ ಗೃಹ ಇಲಾಖೆಯ ಸಂಸ್ಕೃತಿ, ಸಮುದಾಯ ಮತ್ತು ಯುವ ವಿಭಾಗದ ಹೇಳಿಕೆ ತಿಳಿಸಿದೆ.
ಸಿಂಗಾಪುರದಲ್ಲಿ ಜನಾಂಗೀಯ ಅಥವಾ ಧಾರ್ಮಿಕ ಸಮುದಾಯಗಳಿಗೆ ಅವಹೇಳನಕಾರಿಯಾದ ಯಾವುದೇ ವಿಷಯಗಳನ್ನು ವರ್ಗೀಕರಣಕ್ಕೆ ತಿರಸ್ಕರಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.