ಮಂಗಳೂರು: ನಗರದ ಹೊರವಲಯದ ರಾ.ಹೆ.75ರ ಅಡ್ಯಾರ್ ಕಣ್ಣೂರು ಬಳಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಕಾರು ಚಾಲಕ ಮೃತಪಟ್ಟಿದ್ದಾರೆ.
ಮಂಜೇಶ್ವರ ಸಮೀಪದ ಕುಂಜತ್ತೂರು ನಿವಾಸಿ ಇಬ್ರಾಹೀಂ (32) ಮೃತಪಟ್ಟ ಕಾರು ಚಾಲಕ. ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಾಯಗಳಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿ ಕುಂಜತ್ತೂರಿನಿಂದ ಬಂಟ್ವಾಳ ರಸ್ತೆಯಾಗಿ ಈ ಮೂವರು ತೆರಳುತ್ತಿದ್ದರು. ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಕಾರು ಡಿವೈಡರ್ ದಾಟಿದಾಗ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಂಟೈನರ್ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಇದರಿಂದ ಕಾರು ಚಲಾಯಿಸುತ್ತಿದ್ದ ಇಬ್ರಾಹೀಂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸಂಚಾರ ದಕ್ಷಿಣ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.