ಮಲ್ಪೆ: ಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿಗಳಲ್ಲಿ ಆಜಾನ್ ಶಬ್ದವನ್ನು ನಿಯಂತ್ರಿಸಲು ಮೈಕ್‌ಗಳಿಗೆ ಅಳವಡಿಸಲು ಡಿವೈಸ್ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಶಬ್ದ ನಿಯಂತ್ರಣದಲ್ಲಿ ಇರುತ್ತದೆ ಎಂದು ಬೆಂಗಳೂರು ಸಿಟಿ ಜಾಮಿಯಾ ಮಸೀದಿಯ ಖತೀಬ್ ಮೌಲಾನ ಡಾ| ಮೊಹಮ್ಮದ್ ಮಕ್ಸೂದ್ ಇಮ್ರಾನ್ ಸಹಾಬ್ ರಶಾದಿ ಹೇಳಿದ್ದಾರೆ.
ಯಾರಿಗೂ ತೊಂದರೆ ಕೊಡುವುದು ಸರಿಯಲ್ಲ. ಅದಕ್ಕಾಗಿ ಈ ಡಿವೈಸ್ ಸಿದ್ಧಪಡಿಸಲಾಗಿದೆ. ಪ್ರತೀ ಜಿಲ್ಲೆಗೆ ತೆರಳಿ ಈ ಬಗ್ಗೆ ಅರಿವು ಮೂಡಿಸಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಲಾಗುವುದು. ಇದನ್ನು ಆದಷ್ಟು ಬೇಗ ರಾಜ್ಯದ ಎಲ್ಲ ಮಸೀದಿಗಳಲ್ಲೂ ಅಳವಡಿಕೆ ಮಾಡಲಾಗುವುದು. ಇದನ್ನು ದೇವಸ್ಥಾನ, ಚರ್ಚ್, ಗುರುದ್ವಾರಗಳಲ್ಲಿಯೂ ಅಳವಡಿಸಬೇಕಾಗಿದೆ. ಯಾರಿಗೂ ಯಾರೂ ತೊಂದರೆ ಕೊಡಬಾರದು ಎಂದರು.
ಆಜಾನ್‌ಗೆ ಸಂಬಂಧಿಸಿ ಶ್ರೀರಾಮ ಸೇನೆಯವರು ಮಸೀದಿಯ ಮುಂದೆ ಹನುಮಾನ್ ಚಾಲೀಸಾ ಪಠಿಸಿದರೆ ಯಾರೂ ವಿರೋಧ ಮಾಡಬಾರದು. ಅವರಿಗೆ ನೀರು ಬೇಕಾದರೆ ನೀರು, ಜ್ಯೂಸ್ ಬೇಕಾದರೆ ಜ್ಯೂಸ್ ಕೊಡಿ. ಆ ಮೂಲಕ ನಾವು ಸೌಹಾರ್ದದ ಸಂದೇಶವನ್ನು ನೀಡಬೇಕು ಎಂದರು.