ಉಡುಪಿ: ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಮಲ್ಪೆ ಬೀಚ್‌ನಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕ ರಾಜ್ಯದ ಪ್ರಪ್ರಥಮ ತೇಲುವ ಸೇತುವೆಗೆ ಚಾಲನೆ ನೀಡಲಾಗಿದೆ.

100 ಮೀಟರ್ ಉದ್ದ ಹಾಗೂ ಮೂರೂವರೆ ಮೀಟರ್ ಅಗಲ ಇರುವ ಈ ಸೇತುವೆ ಉದ್ದಕ್ಕೂ ತಡೆಬೇಲಿಯನ್ನು ಹಾಕಲಾಗಿದೆ. 10 ವರ್ಷದಿಂದ 60ವರ್ಷ ಪ್ರಾಯದವರು ಇದರಲ್ಲಿ ನಡೆಯುವ ಮೂಲಕ ಹೊಸ ಅನುಭವ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ನಡೆಯುವವರಿಗೆ ಲೈಫ್ ಜಾಕೆಟ್ ಕಡ್ಡಾಯ ಮಾಡಲಾಗಿದೆ. ಸುಮಾರು 80 ಲಕ್ಷ ರೂ. ವೆಚ್ಚದ ವಿದೇಶಿ ತಂತ್ರಜ್ಞಾನದಲ್ಲಿ ತಯಾರಿಸಿದ ಸೇತುವೆ ಇದಾಗಿದೆ. ಪ್ರವಾಸಿಗರ ಸುರಕ್ಷತೆಗಾಗಿ 10 ಜನ ಲೈಫ್ ಗಾರ್ಡ್, 30 ಮಂದಿ ಲೈಫ್ ಬಾಯ್ಸ್ ಮತ್ತು ಪ್ಯಾಟ್ರೋಲಿಂಗ್ ಮಾಡಲು ಒಂದು ಬೋಟು ನಿಯೋಜಿಸಲಾಗಿದೆ.
ಸೇತುವೆಯನ್ನು ಕೇವಲ ಮುಂದಿನ 15 ದಿನಗಳ ಕಾಲ ಪ್ರಾಯೋಗಿಕವಾಗಿ ಆಳವಡಿಸಲಾಗಿದೆ. ಮಳೆಗಾಲಕ್ಕೆ ಎಲ್ಲ ಜಲಕ್ರೀಡೆಗಳನ್ನು ಸ್ಥಗಿತಗೊಳಿಸುತ್ತೇವೆ. ಮುಂದಿನ ಅವಧಿಯಲ್ಲಿ ಇದರಲ್ಲಿರುವ ಲೋಪಗಳನ್ನು ಸರಿಪಡಿಸಿ ಇನ್ನಷ್ಟು ಉತ್ತಮವಾಗಿ ಅಭಿವೃದ್ದಿಪಡಿಸಲಾಗುವುದು ಎಂದು ಮಲ್ಪೆ ಬೀಚ್‌ನ ಗುತ್ತಿಗೆ ದಾರ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ಈ ಸೇತುವೆಯ ಮೇಲೆ ನಡೆದು ಸಾಗುವ ಪ್ರವಾಸಿಗರು ಅಲೆಗಳ ರಭಸಕ್ಕೆ ಸಮುದ್ರಕ್ಕೆ ಬೀಳದಂತೆ ತಡೆಯಲು ಸೇತುವೆಯ ಎರಡು ಬದಿಗಳಲ್ಲಿ ರೇಲಿಂಗ್ಸ್ ಕೂಡ ಅಳವಡಿಸಲಾಗಿದೆ. ಮಲ್ಪೆಯ ಈ ಸೇತುವೆಗೆ ಧನಂಜಯ ಕಾಂಚನ್, ಶೇಖರ್ ಪುತ್ರನ್, ಸುದೇಶ್ ಶೆಟ್ಟಿ ಎಂಬ ಮೂರು ಮಂದಿ ಪಾಲುದಾರರಿದ್ದು 80 ಲಕ್ಷ ಖರ್ಚು ಮಾಡಲಾಗಿದೆ.
ಈ ಸೇತುವೆಗೆ ಹೆಚ್ಚಿನ ಸಾಂಧ್ರತೆಯ ಪೊಂಟೋನ್ಸ್ ಬಾಕ್ಸ್‌ಗಳನ್ನು ಹಾಕಲಾಗಿದೆ. ಒಂದೇ ಬಾರಿ ನೂರು ಜನರು ಈ ಸೇತುವೆ ಮೇಲೆ ಸಾಗಬಹುದಾಗಿದೆ. ಒಬ್ಬರಿಗೆ 15 ನಿಮಿಷಗಳ ಕಾಲ ಕಳೆಯಲು ಅವಕಾಶ ನೀಡಲಾಗಿದೆ. ಒಬ್ಬರು 100 ರೂ. ಟಿಕೆಟ್‌ಗೆ ಪಾವತಿ ಮಾಡಬೇಕು.
ಸೇತುವೆ ಇಕ್ಕೆಲಗಳಲ್ಲಿ 10 ಮಂದಿ ಲೈಫ್ ಗಾರ್ಡ್’ಗಳಿದ್ದು ಅವಘಡಗಳಾದರೂ ರಕ್ಷಣೆಗೆ ಸರ್ವ ಸನ್ನದ್ಧರಾಗಿರುತ್ತಾರೆ. ಈ ಸೇತುವೆಯ ಮೇಲೆ ಉಡುಪಿ ಶಾಸಕ ರಘುಪತಿ ಭಟ್, ಉದ್ಯಮಿ ಜಿ. ಶಂಕರ್ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ವಾಕ್ ಮಾಡಿ ಸೇತುವೆಗೆ ಚಾಲನೆ ನೀಡಿದರು.
ಒಟ್ಟಿನಲ್ಲಿ ರಾಜ್ಯದಲ್ಲಿ ಮೊದಲ ಫ್ಲೋಟಿಂಗ್ ಬ್ರಿಡ್ಜ್ ನಿರ್ಮಾಣ ಆಗಿದ್ದು ಮಳೆಗಾಲ ಆರಂಭವಾಗುವ ಮೊದಲು ಉಡುಪಿಗೆ ಹೋದರೆ ಮಲ್ಪೆಯ ಈ ಸೇತುವೆ ಮೇಲೆ ಹೋಗಲು ಮಾತ್ರ ಮರಿಯಬೇಡಿ.