ಮಂಗಳೂರು: ನಮ್ಮ ಸುತ್ತಮುತ್ತಲಿನ ಕೃಷಿ ತೋಟಗಳಲ್ಲಿ ಸಿಗುವ ಹಡೇ ಬಳ್ಳಿ ಮಾರಕ ಕ್ಯಾನ್ಸರ್ ನಿವಾರಕ ಅನ್ನೋದನ್ನು ಮಂಗಳೂರಿನ ಸಸ್ಯ ವಿಜ್ಞಾನಿಗಳು ಸಾಬೀತು ಮಾಡಿದ್ದಾರೆ.
ಮಂಗಳೂರಿನ ವಿಜ್ಞಾನಿಗಳು ಹಡೇ ಬಳ್ಳಿಯ ಮೇಲೆ ಸಂಶೋಧನೆ ಮಾಡಿದ್ದಾರೆ. ಮಾತ್ರವಲ್ಲ, ಅದನ್ನು ಶುದ್ಧೀಕರಣ ಮಾಡಿ ಕ್ಯಾನ್ಸರ್‌ಗೆ ರಾಮಬಾಣವಾಗುವ ಅಂಶವನ್ನು ಪತ್ತೆ ಹಚ್ಚಿದ್ದಾರೆ. ಈ ಅಂಶಕ್ಕೆ ಭಾರತ ಸರ್ಕಾರದಿಂದ ಪೇಟೆಂಟ್ ಸಹ ಪಡೆದಿದ್ದಾರೆ. ಹಡೇ ಬಳ್ಳಿಯ ಮೇಲೆ ನಡೆದ ದೇಶದ ಮೊದಲ ಸಂಶೋಧನೆ ಇದಾಗಿದ್ದು, ಭಾರತದ ಮೊದಲ ಪೇಟೆಂಟ್ ಕೂಡಾ ಇದಾಗಿದೆ.

ಮಂಗಳೂರು ವಿಶ್ವ ವಿದ್ಯಾನಿಲಯದ ಸಸ್ಯ ಶಾಸ್ತ್ರ ಸಂಶೋಧಕರಾದ ಪ್ರೊ. ಕೆ. ಆರ್ ಚಂದ್ರಶೇಖರ್ ಮತ್ತು ಪ್ರೊ. ಭಾಗ್ಯ ನಕ್ರೆಕಲಾಯ ಹಡೇ ಬಳ್ಳಿಯನ್ನು ಸಂಶೋಧನೆ ಮಾಡಿದ್ದು, ಸದ್ಯ ಈ ಇಬ್ಬರೂ ವಿಜ್ಞಾನಿಗಳು ಮಂಗಳೂರು ವಿಶ್ವ ವಿದ್ಯಾನಿಲಯದಿಂದ ನಿವೃತಿಯಾಗಿದ್ದಾರೆ. ಮಂಗಳೂರು ಖಾಸಗಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಇಬ್ಬರೂ ವಿಜ್ಞಾನಿಗಳು 2017ರಲ್ಲಿ ಸಂಶೋಧನೆ ನಡೆಸಿ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಸುದೀರ್ಘ ಸಮಯದ ಬಳಿಕ ಇವರ ಸಂಶೋಧನೆಗೆ ಪೇಟೆಂಟ್ ಲಭ್ಯವಾಗಿದೆ. 20 ವರ್ಷಗಳ ಅವಧಿಗೆ ಪೇಟೆಂಟ್ ಲಭ್ಯವಾಗಿದ್ದು, ಈ ಸಂಶೋಧನಾ ಅಂಶ ಬಳಸಿ ಔಷಧ ತಯಾರು ಮಾಡಬಹುದಾಗಿದೆ. ಹಡೇ ಬಳ್ಳಿಯ ಅಂಗಾಂಗ ಕಸಿ ಮಾಡಿದ ಬಳಿಕ ರಾಸಾಯನಿಕ ಅಂಶ ಪತ್ತೆ ಮಾಡುವ ಸಂದರ್ಭದಲ್ಲಿ ಕ್ಯಾನ್ಸರ್‌ಗೆ ಮಾರಕವಾಗಬಲ್ಲ ಟೆಂಟ್ರಾಡ್ರೈನ್ ಅಂಶ ಪತ್ತೆಯಾಗಿದೆ. ಭಾರತದಲ್ಲಿ ಈವರೆಗೆ ಯಾರೂ ಈ ವಿಚಾರದಲ್ಲಿ ಸಂಶೋಧನೆ ಮಾಡಿಲ್ಲ .ಹಾಗಾಗಿ ಇದು ಭಾರತದ ಮೊದಲ ಸಂಶೋಧನೆ ಎಂಬ ಗಿರಿಮೆಗೆ ಪಾತ್ರವಾಗಿದೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನ ವಿಜ್ಞಾನಿಗಳು ಈ ಸಂಶೋಧನೆ ಮಾಡಿದ್ದಾರೆ. ಈ ಹಿಂದೆ ಚೀನಾದಲ್ಲೂ ಈ ರೀತಿಯ ಬಳ್ಳಿಯ ಸಂಶೋಧನೆಯನ್ನು ಅಲ್ಲಿನ ವಿಜ್ಞಾನಿಗಳು ಮಾಡಿದ್ದರು. ಅಲ್ಲಿನ ಬಳ್ಳಿಯಲ್ಲೂ ಟೆಂಟ್ರಾಡ್ರೈನ್ ಅಂಶವನ್ನು ಪತ್ತೆ ಮಾಡಿದ್ದರು. ಸಾಮಾನ್ಯವಾಗಿ ಈ ಹಡೇ ಬಳ್ಳಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಭಾಗದಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ. ಗ್ರಾಮೀಣ ಭಾಗದ ಜನರು ಈ ಬಳ್ಳಿಯನ್ನು ಅರೆದು ದೇಹ ತಂಪಾಗಲು ಹಣೆಗೆ ಹಚ್ಚುತ್ತಿದ್ದರು. ನೆಗಡಿ ಜ್ವರ ಶೀತ, ಮಧುಮೇಹ ಸೇರಿದಂತೆ ಕೆಲ ರೋಗಗಳಿಗೆ ಇದು ರಾಮಬಾಣವಾಗಿದೆ.
ಈ ಮೂಲಕ ಪ್ರಕೃತಿಯಲ್ಲಿ ಸಿಗುವ ಹಲವು ಸಸ್ಯ ಪ್ರಬೇಧಗಳು ಹಲವು ರೋಗಗಳಿಗೆ ಚಿಕಿತ್ಸೆಯನ್ನು ನೀಡಬಹುದು ಎಂಬುವುದು ಸಾಬೀತಾಗಿದೆ.