ದಕ್ಷಿಣ ಕನ್ನಡ

ದುಬೈಯಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾದ ಕಲ್ಲಡ್ಕ ನಿವಾಸಿ!

By News Editor

March 09, 2021

ಬಂಟ್ವಾಳ : ಕಲ್ಲಡ್ಕ ಬೋಳಂತೂರು ನಾರ್ಶದ ನಿವಾಸಿ ಮುತ್ತಲಿಬ್ ಎಂಬವರು ದುಬೈಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.

ಮುತ್ತಲಿಬ್ ರವರ ಮೃತದೇಹ ದಿನಾಂಕ 07-03-2021 ಆದಿತ್ಯವಾರ ದಂದು ದುಬೈ ಅಲ್-ರಫಾ ದಲ್ಲಿ ಪತ್ತೆಯಾಗಿತ್ತು.ಅಲ್ಲಿನ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಮುತ್ತಲಿಬ್ ಅವರ ಪಾಸ್ಪೋರ್ಟ್ ನಂಬ್ರ M1788198 ಆಧಾರದಲ್ಲಿ ಭಾರತೀಯ ಪ್ರಜೆ ಎಂದು ಖಚಿತಪಡಿಸಿಕೊಂಡ ದುಬೈ ಪೊಲೀಸರು ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು.

ಕಳೆದ ಹಲವಾರು ದಿನಗಳಿಂದ ಮುತ್ತಲಿಬ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅವರ ಸಂಪರ್ಕ ಯಾರಿಗೂ ಸಿಗದೇ ಇದ್ದಿದ್ದರಿಂದ ಕುಟುಂಬಸ್ಥರು ಆತಂಕಕ್ಕೀಡಾಗಿದ್ದರು. ಇದೀಗ ಮುತ್ತಲಿಬ್ ಮೃತಪಟ್ಟಿರುವುದಾಗಿ ಅಲ್ಲಿನ ಪೊಲೀಸರು ಖಚಿತಪಡಿಸಿದ್ದಾರೆ.

ಮೃತದೇಹ ಪತ್ತೆಗೆ ಕರ್ನಾಟಕ ಕಲ್ಚರಲ್ ಪೋರಂ ( ಕೆಸಿಎಫ್) ಸಹಕಾರ ನೀಡಿತ್ತು. ಅದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ತಹಶೀಲ್ದಾರ್ ಮೂಲಕ ವಿಳಾಸವನ್ನು ಪತ್ತೆ ಹಚ್ಚಲಾಯಿತು. ಇದೀಗ ಮೃತದೇಹ ದುಬೈ ರಾಶೀದ್ ಆಸ್ಪ್ರತೆಯಲ್ಲಿದೆ. ಕೆಸಿಎಫ್ ನಾಯಕರು ಮತ್ತು ಕಾರ್ಯಕರ್ತರು ಮುಂದಿನ ಕಾರ್ಯಗಳಿಗೆ ಸಹಕರಿಸುತ್ತಿದ್ದಾರೆ.

ಮುತ್ತಲಿಬ್ ಬೋಳಂತೂರು ನಾರ್ಶದ ಸೂಫಿ ಮುಕ್ರೀಕರ ಪುತ್ರನಾಗಿದ್ದು, ಮುತ್ತಲಿಬ್ ಈ ಹಿಂದೆ ಧಾರ್ಮಿಕ ಗುರುವಾಗಿ ಕೆಲಸ ಮಾಡಿದ್ದರು. ಆನಂತರ ಇಂಜಿನೀಯರಿಂಗ್ ಪದವಿ ಪಡೆದು ಕೆಲಸಕ್ಕೆ ಸೇರಿಕೊಂಡಿದ್ದರು. ಆನಂತರ ದುಬೈಗೆ ತೆರಳಿದ್ದರು.

ಮುತ್ತಲಿಬ್ ನಾರ್ಶ ಅಂಕಣ ಬರಹಗಾರರಾಗಿದ್ದರು. ವಿಜಯಕಿರಣ, ಮದರಂಗಿ ಪತ್ರಿಕೆಗೆ ಅಂಕಣ ಬರೆದು ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು. ಇವರ ನಿಗೂಢ ಮೃತ್ಯುಗೆ ಕಾರಣ ತಿಳಿದುಬಂದಿಲ್ಲ. ಸಂಪೂರ್ಣ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

Â