ಮಂಗಳೂರು: ಕೊರೋನ ಸೋಂಕು ನಿಗ್ರಹದ ಹಿನ್ನಲೆಯಲ್ಲಿ ರಾಜ್ಯ ಸರಕಾರ ಹೊರಡಿಸಿದ ಆದೇಶದಂತೆ ವಾರಾಂತ್ಯದ ಕರ್ಫ್ಯೂಗೆ ಮಂಗಳೂರಿನ ಜನತೆ ರವಿವಾರವೂ ಉತ್ತಮವಾಗಿ ಸ್ಪಂದಿಸಿದ್ದಾರೆ.
ಒಂದೆಡೆ ಪೊಲೀಸರ ಭಯ, ಇನ್ನೊಂದೆಡೆ ಕೋವಿಡ್ 19ರ ತೀವ್ರತೆಯ ಬಗ್ಗೆ ಮನಗಂಡಿರುವ ನಾಗರಿಕರು ಅನಗತ್ಯ ತಿರುಗಾಟಕ್ಕೆ ಕಡಿವಾಣ ಹಾಕಿರುವುದು ವ್ಯಕ್ತವಾಗುತ್ತಿತ್ತು. ಅಂಗಡಿಗಳ ಮುಂದೆ ನೂಕುನುಗ್ಗಲು ಕಾಣಿಸಲಿಲ್ಲ. ಬೆಳಗ್ಗೆಯೇ ಅಗತ್ಯ ಸಾಮಗ್ರಿಗಳನ್ಬು ಖರೀದಿಸಿ ಮನೆಯತ್ತ ಮರಳಿದ್ದಾರೆ. ನಗರದಲ್ಲಿ ಅಗತ್ಯ ವಾಹನಗಳಷ್ಟೇ ಸಂಚರಿಸುತ್ತಿತ್ತು.
ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರವು ಶನಿವಾರದಂತೆ ರವಿವಾರವೂ ಸ್ಥಗಿತಗೊಂಡಿತ್ತು. ಹಾಗಾಗಿ ನಗರದ ಆಯಕಟ್ಟಿನ ಪ್ರದೇಶ, ಮಾರುಕಟ್ಟೆ, ಜನನಿಬಿಡ ಸ್ಥಳಗಳು ಬಿಕೋ ಎನ್ನುತ್ತಿತ್ತು. ಇಂದು ಬೆಳಗ್ಗಿನ ಹೊತ್ತು ದಿನಸಿ, ತರಕಾರಿ, ಹಣ್ಣುಹಂಪಲು, ಹಾಲು, ಮೀನು ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳು, ಮಾರುಕಟ್ಟೆಗಳು ಮಾತ್ರ ತೆರೆದಿತ್ತು. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಮಾತ್ರ ಬೆರಳೆಣಿಕೆಯ ಸರಕಾರಿ ಬಸ್ಸುಗಳು ಸಂಚರಿಸುತ್ತಿತ್ತು. ಕೆಲವೇ ಕೆಲವು ಹೋಟೆಲ್‌ಗಳು ತೆರೆದಿದ್ದು, ಅಲ್ಲಿ ಆಹಾರ- ತಿಂಡಿಗಳ ಪಾರ್ಸೆಲ್‌ಗಳ ಸರಬರಾಜಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇನ್ನೂ ಸ್ಟೇಟ್‌ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆ ಬೆಳಗ್ಗೆ ತೆರೆದಿತ್ತು. ಪೊಲೀಸರು ಮಾಸ್ಕ್ ಧರಿಸಲು, ಸುರಕ್ಷಿತ ಅಂತರ ಕಾಪಾಡಲು ಸೂಚನೆ ನೀಡುತ್ತಿದ್ದರು.