ಉಡುಪಿ: ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯ ಮೇಲೆ ಚಿಕ್ಕಪ್ಪನೇ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದ 36 ವರ್ಷ ಪ್ರಾಯದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿಯಲ್ಲಿ 20 ವರ್ಷ ಕಠಿಣ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
2019ರಲ್ಲಿ 16 ವರ್ಷ ಪ್ರಾಯದ ಬಾಲಕಿಯನ್ನು ಆಕೆಯ ಚಿಕ್ಕಪ್ಪ (ಸಂತ್ರಸ್ತೆ ತಾಯಿಯ ತಂಗಿ ಗಂಡ) ತನ್ನ ಮನೆಯಲ್ಲಿ ಆಕೆಯ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ. ಆಕೆ 7 ತಿಂಗಳ ಗರ್ಭವತಿಯಾದ ಬಳಿಕ ಘಟನೆ ಕುಟುಂಬಿಕರ ಗಮನಕ್ಕೆ ಬಂದಿದ್ದು ವಿಚಾರಿಸಿದಾಗ ಆರೋಪಿ ಚಿಕ್ಕಪ್ಪ ಎಂಬುದಾಗಿ ತಿಳಿದಿತ್ತು. ಆರೋಪಿ ಕೂಲಿ ಕೆಲಸ ಮಾಡಿಕೊಂಡಿದ್ದ.
ಈ ಬಗ್ಗೆ ಬಾಲಕಿಯ ತಾಯಿ ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆಯೇ ಆರೋಪಿಯನ್ನು ಬಂಧಿಸಲಾಗಿದ್ದು ಬಳಿಕ ಆತ ಜಾಮೀನು ಪಡೆದು ಹೊರಗೆ ಬಂದಿದ್ದನು.
ಅಂದಿನ ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಸಂತ್ರಸ್ತೆಯ ತಾಯಿ ಹಾಗೂ ತಂದೆ ಪ್ರಾಸಿಕ್ಯೂಷನ್ ಪೂರಕವಾಗಿ ಸಾಕ್ಷ್ಯ ನುಡಿದಿದ್ದರು. ನ್ಯಾಯಾಲಯದಲ್ಲಿ 22 ಸಾಕ್ಷಿಗಳ ಪೈಕಿ 16 ಮಂದಿ ವಿಚಾರಣೆ ಮಾಡಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎರ್ಮಾಳ್ ಕಲ್ಪನಾ ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯ ಪಟ್ಟು ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿದ್ದು ದಂಡ ತೆರಲು ತಪ್ಪಿದಲ್ಲಿ 1 ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಮೊದಲಿಗೆ ವಿಚಾರಣೆ ಕುಂದಾಪುರ ನ್ಯಾಯಾಲಯದಲ್ಲಿ ನಡೆದಿತ್ತು. ಪ್ರಾಥಮಿಕ ಹಂತದ ವಿಚಾರಣೆಯನ್ನು ಪ್ರಾಸಿಕ್ಯೂಷನ್ ಪರವಾಗಿ ಜಿಲ್ಲಾ ಸರ್ಕಾರಿ ಅಭಿಯೋಜಕ ಪ್ರಕಾಶ್ ಚಂದ್ರ ಶೆಟ್ಟಿ ಬೇಳೂರು ನಡೆಸಿದ್ದು ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಮುಂದುವರಿದ ವಿಚಾರಣೆ ಹಾಗೂ ವಾದವನ್ನು ಮಂಡಿಸಿದ್ದರು.