ಉಡುಪಿ: ಜಿಲ್ಲೆಯಲ್ಲಿ ನಡೆದ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಫ್ರೀಡಂ ರನ್ಗೆ ಚಾಲನೆ ನೀಡಿದರು.

ನಗರದ ಮಹಾತ್ಮ ಗಾಂಧಿ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಲಾಯಿತು. ನೆಹರು ಯುವ ಕೇಂದ್ರ, ಉಡುಪಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಎನ್ಸಿಸಿ, ಎನ್ಎಸ್ಎಸ್, ಭಾರತ ಸ್ಕೌಡ್ಸ ಮತ್ತು ಗೈಡ್ಸ್, ರೆಡ್ಕ್ರಾಸ್, ಉಡುಪಿಯ ಕೆನಾರ ಬ್ಯಾಂಕ್ ಸರ್ಕಲ್ ಆಫೀಸ್ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು. ನೂರಾರು ವಿದ್ಯಾರ್ಥಿಗಳಿಂದ ಪಿಟ್ ಇಂಡಿಯಾ ಓಟ ನಡೆಯಿತು. ವಿದ್ಯಾರ್ಥಿಗಳ ಜೊತೆ ಓಟದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಶೋಭಾ ಕರಂದ್ಲಾಜೆ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಾವು ಭಾಗಿಯಾಗಿಲ್ಲ. ನಮ್ಮ ಹಿರಿಯರು ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಕೈಜೋಡಿಸೋಣ. ಭಾರತವನ್ನು ಸದೃಢ ಮಾಡುವ ಅವಕಾಶ ನಮ್ಮ ಕೈಯಲ್ಲಿದೆ. ವಿದ್ಯಾರ್ಥಿಗಳು 25 ವರ್ಷದ ಮುಂದಿನ ಕನಸು ಕಾಣಬೇಕು. ಭಾರತವನ್ನು ವಿಶ್ವದಲ್ಲೇ ನಂಬರ್ 1 ಸ್ಥಾನಕ್ಕೆ ಸೇರಿಸಬೇಕು ಎಂದು ತಿಳಿಸಿದರು.