ಗುವಾಹಾಟಿ: ಹಸಮಣೆಯಲ್ಲಿ ಕೈ ಹಿಡಿಯಬೇಕಿದ್ದಾಕೆಯೇ ಭಾವಿ ಪತಿಯ ಕೈಗೆ ಕೋಳ ತೊಡಿಸಿದ್ದಾರೆ. ಹೌದು.. ಶೀಘ್ರದಲ್ಲಿಯೇ ದಾಂಪತ್ಯ ಜೀವನ ಪ್ರವೇಶಿಸಬೇಕೆಂದಿರುವ ಮಹಿಳಾ ಪೊಲೀಸ್ ಅಧಿಕಾರಿಗೆ ಪತಿಯಾಗುವವನನ್ನೇ ಬಂಧಿಸಬೇಕಾದ ಸ್ಥಿತಿ ಬಂದೊದಗಿದೆ.
ಅಸ್ಸಾಂನ ನಾಗಾನ್‌ನ ಪೊಲೀಸ್ ಅಧಿಕಾರಿ ಜುನ್ಮೋನಿ ರಭಾ ಅವರು ದಾಖಲಿಸಿದ ಎಫ್‌ಐಆರ್ ಅನುಗುಣವಾಗಿ ಅವರ ಭಾವಿ ಪತಿ ರಾಣಾ ಪೊಗಾಗ್ ಎಂಬಾತನನ್ನು ಬಂಧಿಸಲಾಗಿದೆ.

ತಾನು ಅಸ್ಸಾಂನಲ್ಲಿನ ಒಎನ್‌ಜಿಸಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪೊಗಾಗ್ ಸುಳ್ಳು ಹೇಳಿಕೊಂಡಿದ್ದ. ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ. ಹೀಗೆ ಆತ ಜನರಿಂದ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋರ್ಟ್‌ಗೆ ಹಾಜರುಪಡಿಸಿದಾಗ ಆತನನ್ನು 2 ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ.
ಅಸ್ಸಾಂನ ನಾಗಾನ್ ಜಿಲ್ಲೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿರುವ ಜುನ್ಮೋನಿ ರಭಾ ಅವರಿಗೆ ತಾನು ಒಎನ್‌ಜಿಸಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಎಂದು ಆತ ಪರಿಚಯಿಸಿಕೊಂಡಿದ್ದ. ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ ಇಬ್ಬರ ನಿಶ್ಚಿತಾರ್ಥ ಕೂಡ ಮುಗಿದು ಹೋಗಿತ್ತು. ನವೆಂಬರ್‌ನಲ್ಲಿ ಇಬ್ಬರೂ ಮದುವೆಯಾಗಬೇಕಿತ್ತು.
ಆದರೆ ಮದುವೆಗೂ ಮುನ್ನವೇ ಪೊಗಾಗ್‌ನ ಕುತಂತ್ರ ಬುದ್ದಿ ಬಗ್ಗೆ ರಭಾ ಅವರಿಗೆ ಗೊತ್ತಾಗಿದೆ. ಕೂಡಲೇ ಅವರು ಎಫ್‌ಐಆರ್ ದಾಖಲಿಸಿದ್ದಾರೆ. “ನನ್ನ ಬಳಿ ಬಂದು, ರಾಣಾ ಪೊಗಾಗ್ ಎಂತಹ ದೊಡ್ಡ ವಂಚಕ ಎಂದು ಮಾಹಿತಿ ನೀಡಿದ ಮೂವರು ವ್ಯಕ್ತಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಅವರು ನನ್ನ ಕಣ್ಣು ತೆರೆಸಿದ್ದಾರೆ” ಎಂದು ರಭಾ ತಿಳಿಸಿದ್ದಾರೆ.
ಪೊಗಾಗ್ ಕುರಿತು ಬಂದ ಮಾಹಿತಿ ಆಧಾರದಲ್ಲಿ ಜುನ್ಮೋನಿ ಅವರು ಗೋಪ್ಯವಾಗಿ ತನಿಖೆ ಆರಂಭಿಸಿದ್ದರು. ಆತನ ಚೀಲವನ್ನು ಪರಿಶೀಲಿಸಿದಾಗ ಒಎನ್‌ಜಿಸಿಯ ನಕಲಿ ಸೀಲುಗಳು ಮತ್ತು ದಾಖಲೆಗಳು ಪತ್ತೆಯಾಗಿದ್ದವು. ಹೀಗಾಗಿ ಅವರು ಎಫ್‌ಐಆರ್ ದಾಖಲಿಸಿದ್ದರು. ಅದರ ಅನ್ವಯ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಕ್ಟೋಬರ್ 8ರಂದು ಇಬ್ಬರ ನಿಶ್ಚಿತಾರ್ಥ ನಡೆದಿತ್ತು. ಅದರ ನಂತರ ಜುನ್ಮೋನಿ ಅವರು ಮಜೂಲಿ ಜಿಲ್ಲೆಯಲ್ಲಿ ಕರ್ತವ್ಯಕ್ಕೆ ಮರಳಿದ್ದರು. ಆಗ ಅವರ ಮನೆಗೆ ಬಂದಿದ್ದ ಕೆಲವು ವ್ಯಕ್ತಿಗಳು, ಪೊಗಾಗ್‌ನ ವಂಚನೆ ಬಗ್ಗೆ ಮಾಹಿತಿ ನೀಡಿದ್ದರು. ತನಗೆ ಅಸ್ಸಾಂನ ಸಿಲ್ಚಾರ್‌ಗೆ ವರ್ಗಾವಣೆ ಆಗಿದೆ ಎಂದು ಪೊಗಾಗ್ ಸುಳ್ಳು ಹೇಳಿಕೊಂಡಿದ್ದ. ಆದರೆ ಕೆಲಸಕ್ಕೆ ಹೋಗದೆ ಇರುವುದರ ಕುರಿತು ಪ್ರಶ್ನಿಸಿದಾಗ, ತನ್ನಿಂದ ದೂರ ಇರಲು ಬಯಸಿದ್ದೀಯಾ ಎಂದು ಮರು ಪ್ರಶ್ನೆ ಹಾಕಿದ್ದ ಎಂದು ಜುನ್ಮೋನಿ ಹೇಳಿದ್ದಾರೆ.
ಜುನ್ಮೋನಿ ರಭಾ ಅವರು ಜನವರಿಯಲ್ಲಿ ಸುದ್ದಿಯಾಗಿದ್ದರು. ಬಿಹ್ಪುರಿಯಾ ಕ್ಷೇತ್ರದ ಬಿಜೆಪಿ ಶಾಸಕ ಅಮಿಯಾ ಕುಮಾರ್ ಭುಯಾನ್ ಅವರನ್ನು ಫೋನ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.