ಮುಂಬೈ: ಬಾಲಿವುಡ್ ನಟ ಶಾರುಕ್ ಖಾನ್ ಅವರ ನಿವಾಸ ‘ಮನ್ನತ್’ಗೆ ಸಮೀಪದಲ್ಲಿರುವ ಬಹುಮಹಡಿ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್ ಪ್ರದೇಶದಲ್ಲಿರುವ 21 ಅಂತಸ್ತಿನ ‘ಜಿವೇಶ್’ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 8 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಕಟ್ಟಡದ 14ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಂಬೈ ಅಗ್ನಿ ಶಾಮಕ ದಳ ಮತ್ತು ಪೊಲೀಸರು ಖಚಿತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮುಂಬೈ ಉಪನಗರ ಅಭಿವೃದ್ಧಿ ಸಚಿವ ಆದಿತ್ಯ ಠಾಕ್ರೆ, ‘ಪಶ್ಚಿಮ ಬಾಂದ್ರಾದಲ್ಲಿರುವ 21 ಅಂತಸ್ತಿನ ಕಟ್ಟಡದ 14ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ವರದಿಯಾಗಿದೆ. ಅಗ್ನಿ ಶಾಮಕ ದಳ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಬಿಎಂಸಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಯಾವುದೇ ಸಾವಿನ ವರದಿಯಾಗಿಲ್ಲ. ಕಟ್ಟಡದ ಆವರಣದಲ್ಲಿರುವ ನಿವಾಸಿಗಳ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.