ಕೊಲ್ಲಂ: ಹದಿಹರೆಯದ ಯುವಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕ್ರೈಸ್ತ ಪಾದ್ರಿಯೋರ್ವನಿಗೆ ಕೇರಳ ಹೈಕೋರ್ಟ್ 18 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ನೀಡಿದೆ.
ಫಾದರ್ ಥಾಮ ಪರೆಕ್ಕುಲಮ್ (35) ಚೆನ್ನೈ ಮೂಲದ ಎಸ್ ಡಿಎಂ ಮೈನರ್ ಸೆಮಿನರಿಯ ಸದಸ್ಯ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯಾಗಿದ್ದು ಈತನ ವಿರುದ್ಧ ಪುಥೂರ್ ಪೊಲೀಸರು ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ)ರ ಅಡಿಯಲ್ಲಿ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. 2017 ರಲ್ಲಿ ಕೊಲ್ಲಂನಲ್ಲಿ ಈ ಪಾದ್ರಿ ಅಂದು ಅಪ್ರಾಪ್ತರಾಗಿದ್ದ ನಾಲ್ವರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಘಟನೆ ನಡೆದಾಗ ಸೆಮಿನರಿ ವಿದ್ಯಾರ್ಥಿಗಳಾಗಿದ್ದ ನಾಲ್ವರು ಯುವಕರೂ 16 ವಯಸ್ಸಿನವರಾಗಿದ್ದರು. ಪಾದ್ರಿ ಅಂದು ರೆಕ್ಟಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಪ್ರತಿ ಮೂರು ಪ್ರಕರಣಗಳಲ್ಲೂ ತಲಾ 5 ವರ್ಷ ಶಿಕ್ಷೆಯನ್ನು ವಿಧಿಸಲಾಗಿದ್ದು, ನಾಲ್ಕನೇ ಪ್ರಕರಣದಲ್ಲಿ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ ಹಾಗೂ ಪ್ರತಿ ಪ್ರಕರಣದ ಸಂತ್ರಸ್ತನಿಗೂ 1 ಲಕ್ಷ ರೂಪಾಯಿ ಪರಿಹಾರ ನೀಡಲು ನ್ಯಾಯಾಧೀಶರು ಆದೇಶಿಸಿದ್ದಾರೆ.