ಮುಂಬಯಿ: ಕೊರೊನಾ ಮತ್ತೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪ್ರಸರಣ ತಡೆಗೆ ಮಹಾರಾಷ್ಟ್ರ ಸರಕಾರವು ಮುಂಬಯಿ ಮತ್ತು ನಾಗಪುರಗಳಲ್ಲಿ ಕಠಿಣ ನಿರ್ಬಂಧಗಳನ್ನು ಹೇರಿದೆ.

ಮುಂಬಯಿ ಹಾಗೂ ನಾಗಪುರ ಮಹಾನಗರ ಪಾಲಿಕೆಗಳು ಸೀಲ್‌ಡೌನ್‌ ಸೇರಿ ಹಲವು ನಿರ್ಬಂಧಗಳನ್ನು ವಿಧಿಸಿ ಆದೇಶ ಹೊರಡಿಸಿವೆ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹಾಗೂ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದ ಬೆನ್ನಲ್ಲೇ ಹೊಸ ನಿರ್ಬಂಧಗಳು ಹೊರಬಿದ್ದಿವೆ.

75 ದಿನಗಳ ಬಳಿಕ ಮಹಾರಾಷ್ಟ್ರದಲ್ಲಿ ಶುಕ್ರವಾರ ಕೊರೊನಾ ಪ್ರಕರಣಗಳ ಸಂಖ್ಯೆ 6 ಸಾವಿರದ ಗಡಿ ದಾಟಿದೆ. ಐದಕ್ಕಿಂತಲೂ ಹೆಚ್ಚಿನ ಸೋಂಕಿತರು ಪತ್ತೆಯಾದಲ್ಲಿ ಅಂತಹ ಕಟ್ಟಡವನ್ನು ಸೀಲ್‌ಡೌನ್‌ ಮಾಡಲು ನಿರ್ಧರಿಸಲಾಗಿದೆ. ಅಪಾರ್ಟ್‌ಮೆಂಟ್‌ಗಳೇ ಹೆಚ್ಚಿರುವ ಕಾರಣ ಸೋಂಕು ಪ್ರಸರಣ ನಿಯಂತ್ರಣಕ್ಕೆ ಇದು ಅಗತ್ಯ ಎಂದು ಎರಡೂ ಪಾಲಿಕೆಗಳು ಹೇಳಿವೆ. ಹೋಟೆಲ್‌ಗಳಲ್ಲಿ ಶೇ.50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಧರಿಸದೇ ಅಡ್ಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು 5,000 ಮಾರ್ಷಲ್‌ಗಳನ್ನು ಬೃಹನ್ಮುಂಬಯಿ ಮಹಾನಗರ ಪಾಲಿಕೆ ನೇಮಕ ಮಾಡಿಕೊಂಡಿದೆ. ಆ ಪೈಕಿ 300 ಜನರನ್ನು ರೈಲ್ವೆ ನಿಲ್ದಾಣಗಳಲ್ಲಿ ನೇಮಕ ಮಾಡಲಾಗಿದೆ.

”ಸೋಂಕಿತರು ಹೋಮ್‌ ಐಸೋಲೇಷನ್‌ ನಿಯಮ ಪಾಲಿಸುತ್ತಿಲ್ಲ. ಮದುವೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಸರಕಾರ ಎಚ್ಚರಿಕೆ ನೀಡಿದೆ.

ಯಾವತ್ಮಲ್‌ ಜಿಲ್ಲಾಡಳಿತ10 ದಿನಗಳ ಲಾಕ್‌ಡೌನ್‌ ಘೋಷಿಸಿದೆ. ಜಿಲ್ಲೆಯಲ್ಲಿ 5ರಿಂದ 9ನೇ ತರಗತಿವರೆಗೆ ಶಾಲೆಗಳನ್ನು ಹಾಗೂ ಕಾಲೇಜು ಮತ್ತು ಕೋಚಿಂಗ್‌ ಸೆಂಟರ್‌ಗಳನ್ನು ಫೆ.28 ರವರೆಗೆ ಮುಚ್ಚಲಾಗಿದೆ. ಅಮರಾವತಿಯಲ್ಲಿವೀಕೆಂಡ್‌ ಲಾಕ್‌ಡೌನ್‌ ಘೋಷಿಸಲಾಗಿದೆ. ವಾರ್ಧಾ ನಗರದಲ್ಲಿ ಶನಿವಾರ ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 8ರವರೆಗೆ ಕಫ್ರ್ಯೂ ಹೇರಲಾಗಿದೆ. ಆದರೆ ಅಗತ್ಯ ಸೇವೆಗಳಿಗೆ ಹಾಗೂ ತುರ್ತು ಸಂಚಾರಕ್ಕೆ ಯಾವುದೇ ತೊಡಕಾಗದು ಎಂದು ಸ್ಥಳೀಯ ಆಡಳಿತ ಹೇಳಿದೆ.

Share.

Leave A Reply