ಹೊಸದಿಲ್ಲಿ: ಜ್ಞಾನವಾಪಿ ಮಸೀದಿ ಸಮೀಕ್ಷೆ ಪೂರ್ಣಗೊಂಡಿರುವ ಹಾಗೂ ಮಥುರಾದ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆ ಕೋರಿ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ದೇಶದಲ್ಲಿರುವ ಎಲ್ಲ ಮಸೀದಿಗಳ ಸಮೀಕ್ಷೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
”ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಥವಾ ಸರಕಾರದ ಯಾವುದೇ ಸಂಸ್ಥೆಯು ಗುರುತಿಸಿದ ಹಾಗೂ ಒಂದು ಶತಮಾನ ಅಥವಾ ಅದಕ್ಕಿಂತ ಹಳೆಯದಾದ ಮಸೀದಿಗಳ ಸಮೀಕ್ಷೆ ಮಾಡಬೇಕು,” ಎಂದು ಕೋರಿ ವಕೀಲರಾದ ಶುಭಂ ಅವಸ್ಥಿ ಹಾಗೂ ಸಪ್ತರ್ಷಿ ಮಿಶ್ರಾ ಎಂಬುವರು ಅರ್ಜಿ ಸಲ್ಲಿಸಿದ್ದಾರೆ.
”ಪುರಾತನ ಮಸೀದಿಗಳಲ್ಲಿ ಸಮೀಕ್ಷೆ ನಡೆಸಿದರೆ ಹಿಂದೂಗಳು, ಸಿಖ್ಖರು, ಜೈನರು ಅಥವಾ ಬೌದ್ಧರ ದೇವಾಲಯಗಳು ಸಿಗಬಹುದು. ಹಾಗಾಗಿ, ಇವುಗಳ ಸಮೀಕ್ಷೆ ನಡೆಸಿ, ಆ ಸಮೀಕ್ಷಾ ವರದಿಯನ್ನು ಗೌಪ್ಯವಾಗಿಡುವ ಮೂಲಕ ಕೋಮುವಾದ ಹಾಗೂ ಕೋಮುದ್ವೇಷವನ್ನು ತಡೆಯಬಹುದು. ಹಾಗೆಯೇ, ಮಸೀದಿಗಳಲ್ಲಿರುವ ಬಾವಿಗಳಲ್ಲಿ ಕೈ-ಕಾಲು ತೊಳೆಯುವುದನ್ನು ತಡೆಯಬೇಕು. ಇದಕ್ಕಾಗಿ ಬೇರೆ ವ್ಯವಸ್ಥೆ ಮಾಡಬೇಕು,” ಎಂದು ಉಲ್ಲೇಖಿಸಿದ್ದಾರೆ.
ಮಾಧ್ಯಮಿಕ ಇತಿಹಾಸದ ಅವಧಿಯಲ್ಲಿ ಆಕ್ರಮಣಕಾರರು ಹಿಂದೂಗಳು, ಜೈನರು, ಸಿಖ್ಖರು ಹಾಗೂ ಬೌದ್ಧರ ದೇವಾಲಯಗಳನ್ನು ಕೆಡವಿ, ಮಸೀದಿಗಳನ್ನು ನಿರ್ಮಿಸಿದ್ದಾರೆ. ಹಾಗಾಗಿ, ಮಸೀದಿಗಳಲ್ಲಿ ಬೇರೆ ಧರ್ಮದ ದೇವಾಲಯಗಳು, ಮೂರ್ತಿಗಳು ಪತ್ತೆಯಾಗುತ್ತಿವೆ. ಸಮೀಕ್ಷೆ ನಡೆಸಿ, ಸೌಹಾರ್ದದ ಸಂಕೇತವಾಗಿ ಮೂಲ ದೇಗುಲಗಳನ್ನು ಆಯಾ ಧರ್ಮದವರಿಗೆ ನೀಡಬೇಕು ಎಂದು ಪ್ರಸ್ತಾಪಿಸಲಾಗಿದೆ.
ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಂತಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆ ಈಗಾಗಲೇ ಮುಗಿದಿದ್ದು, ಸಮೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮತ್ತೊಂದೆಡೆ, ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿಯಲ್ಲಿ ಸಮೀಕ್ಷೆ ನಡೆಸಬೇಕು ಹಾಗೂ ದಿಲ್ಲಿಯ ಕುತುಬ್ ಮಿನಾರ್ ಆವರಣದಲ್ಲಿರುವ ಮಸೀದಿಯೊಂದರಲ್ಲಿ ಪೂಜೆಗೆ ಅವಕಾಶ ಸಲ್ಲಿಸಬೇಕು ಎಂದು ಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸಲಾಗಿದೆ.