ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಜೈಲುವಾಸ ಮುಗಿಸಿ ಶಶಿಕಲಾ ನಟರಾಜನ್ ವಾಪಸ್ಸಾಗಿರುವುದು ತಮಿಳುನಾಡು ರಾಜಕೀಯದಲ್ಲಿ ತಲ್ಲಣ ಮೂಡಿಸಿದ್ದು, ಎಐಎಡಿಎಂಕೆಯಲ್ಲಿ ಬಿರುಗಾಳಿ ಎಬ್ಬಿಸಿದೆ.

ಶಶಿಕಲಾ ನಟರಾಜನ್ ಇದೀಗ ಎಐಎಡಿಎಂಕೆಯಿಂದ ತಮ್ಮನ್ನು ಉಚ್ಚಾಟನೆ ಮಾಡಿರುವ ವಿರುದ್ಧ ಚೆನ್ನೈ ನ್ಯಾಯಾಲಯದ ಮೊರೆ ಹೋಗಿದ್ದಾರೆ. 2017ರಲ್ಲಿ ಶಶಿಕಲಾ ನಟರಾಜನ್ ಅವರನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಇದೀಗ ಜೈಲಿನಿಂದ ಬಿಡುಗಡೆಯಾಗಿರುವ ಶಶಿಕಲಾ ನಟರಾಜನ್ ಚೆನ್ನೈ ಕೋರ್ಟ್‌ನಲ್ಲಿ ಎಐಎಡಿಎಂಕೆಗೆ ಸವಾಲು ಹಾಕಿದ್ದಾರೆ. ಮಾರ್ಚ್ 15ರಂದು ಈ ಸಂಬಂಧ ಅರ್ಜಿ ವಿಚಾರಣೆ ನಡೆಯಲಿದೆ. ಮದ್ರಾಸ್ ಹೈಕೋರ್ಟ್‌ ಮುಂದೆ ಈ ಅರ್ಜಿ ಬಂದಿದ್ದು, ಇದನ್ನು ಸಿವಿಲ್ ಕೋರ್ಟ್‌ಗೆ ವರ್ಗಾಯಿಸಲಾಗಿದೆ. ಶಶಿಕಲಾ ಹಾಗೂ ಎಎಂಎಂಕೆ ಮುಖ್ಯಸ್ಥ ಟಿಟಿವಿ ದಿನಕರನ್ ಈ ಅರ್ಜಿ ಸಲ್ಲಿಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಜೈಲು ಸೇರಿದ್ದ ಶಶಿಕಲಾ ನಟರಾಜನ್ ನಾಲ್ಕು ವರ್ಷಗಳ ಜೈಲುವಾಸ ಅನುಭವಿಸಿ ಜನವರಿ 27ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು. ಕೊರೊನಾ ಸೋಂಕಿನ ಕಾರಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ, ಚೆನ್ನೈಗೆ ಫೆ.8ರಂದು ಚೆನ್ನೈಗೆ ಮರಳಿದ್ದರು. ತಮಿಳುನಾಡಿಗೆ ಮರಳಿದ ನಂತರ ತಾವು ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಬರುವುದಾಗಿಯೂ ಘೋಷಿಸಿದ್ದರು.

Share.

Leave A Reply