ಬೆಂಗಳೂರು: ನಾಲ್ಕು ವರ್ಷದ ಬಳಿಕ ಬೆಂಗಳೂರಿಂದ ತಮಿಳುನಾಡಿಗೆ ಹೊರಟ ಶಶಿಕಲಾ ಅಲಿಯಾಸ್ ಚಿನ್ನಮ್ಮಳನ್ನು ಸ್ವಾಗತಿಸಲು ಬಂದಿದ್ದ ಬೆಂಬಲಿಗರ ಎರಡು ಕಾರುಗಳು ಮಾರ್ಗಮಧ್ಯೆ ಹೊತ್ತಿ ಉರಿದಿವೆ.
ಅಕ್ರಮ ಆಸ್ತಿ ಗಳಿಕೆಗೆ ಸಂಬಂಧ 4 ವರ್ಷ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸಿ ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದ ಎಐಎಡಿಎಂಕೆಯ ಉಚ್ಛಾಟಿತ ನಾಯಕಿ ವಿ.ಕೆ. ಶಶಿಕಲಾ ಇಂದು(ಸೋಮವಾರ) ಬೆಳಗ್ಗೆ ತಮಿಳುನಾಡಿಗೆ ಪ್ರಯಾಣ ಬೆಳೆಸಿದರು.
ದಾರಿಯುದ್ದಕ್ಕೂ ಶಶಿಕಲಾರನ್ನ ಸ್ವಾಗತಿಸಲು ಅಭಿಮಾನಿಗಳು ಕಟೌಟ್ಗಳನ್ನು ಕಟ್ಟಿ, ಪಟಾಕಿ ಸಿಡಿಸಿದರು. ರಸ್ತೆಯ ಹಲವೆಡೆ ಅಮ್ಮಾ ಮಕ್ಕಳ್ ಮುನ್ನೇಟ್ರಾ ಕಳಗಮ್ (AMMK) ಪಾರ್ಟಿ ಬಾವುಟಗಳು ರಾರಾಜಿಸುತ್ತಿವೆ. ಹೆದ್ದಾರಿಯ ಅಲ್ಲಲ್ಲಿ ಬಾಳೆಕಂದುಗಳಿಂದ ಸಿಂಗರಿಸಿ, ರಸ್ತೆ ಡಿವೈಡರ್ಗೆ ಬಲೂನ್ಗಳಿಂದ ಸಿಂಗರಿಸಲಾಗಿದೆ. ಅಭಿಮಾನಿಗಳಿಂದ ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಲಾಗಿದೆ. ಚಿನ್ನಮ್ಮ ಕಾರನ್ನು ನೂರಾರು ಕಾರುಗಳು ಹಿಂಬಾಲಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇನ್ನು ಈ ನಡುವೆ ಕೃಷ್ಣಗಿರಿ ಟೋಲ್ ಗೇಟ್ ಬಳಿ ಶಶಿಕಲಾ ಬೆಂಬಲಿಗರ ಎರಡು ಕಾರಿಗೆ ಬೆಂಕಿಗೆ ಆಹುತಿಯಾಗಿದೆ. ಶಶಿಕಲಾ ಅವರನ್ನು ಸ್ವಾಗತಿಸಲು ಅಭಿಮಾನಿಗಳು ಕಾರಿನಲ್ಲಿ ಪಟಾಕಿ ತುಂಬಿಕೊಂಡು ಬಂದಿದ್ದರು. ಬಿಸಿಲಿನ ಶಾಖ ಹೆಚ್ಚಾಗಿ ಕಾರಿನಲ್ಲೇ ಪಟಾಕಿಗಳು ಎರಡು ಕಾರು ಹೊತ್ತಿ ಉರಿದಿದೆ.
ಇನ್ನು ಮಾರ್ಗಮಧ್ಯೆ ಹೊಸೂರಿನಲ್ಲಿ ಮುತ್ತು ಮಾರಿಯಮ್ಮ ದೇವಾಲಯಕ್ಕೆ ತೆರಳಿದ ಚಿನ್ನಮ್ಮ, ದೇವಿ ದರ್ಶನ ಪಡೆದು ಪ್ರಯಾಣ ಮುಂದುವರಿಸಿದರು.