ಚೆಮೋಲಿ: ಉತ್ತರಾಖಂಡ್​ನ ಚಮೋಲಿ ಜಿಲ್ಲೆಯಲ್ಲಿ ನಿನ್ನೆ ಸಂಭವಿಸಿದ ಭಾರೀ ಹಿಮಕುಸಿತದಿಂದಾಗಿ ತಪೋವನ್ ಡ್ಯಾಮ್‌ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ ಎಂದು ಭಾರತೀಯ ವಾಯುಸೇನೆ ಮೂಲಗಳು ತಿಳಿಸಿವೆ.

ಈ ಸರ್ವೇಯಿಂದ ತಪೋವನ್- ವಿಷ್ಣುಘಡ ಹೈಡ್ರೋಪವರ್ ಪ್ಲಾಂಟ್​​ಗೆ ಉಂಟಾದ ಹಾನಿ ಬಗ್ಗೆ ಪ್ರಾಥಮಿಕ ಸರ್ವೇ ನಡೆಸಲಾಗಿದ್ದು, ಈ ಘಟನೆಯಿಂದಾಗಿ ಡ್ಯಾಂ ಸಂಪೂರ್ಣವಾಗಿ ಕೊಚ್ಚಿಹೋಗಿದೆ ಎಂದು ತಿಳಿದು ಬಂದಿದೆ.

ಅಂದ್ಹಾಗೆ, ಧೌಲಿಗಂಗಾ ಮತ್ತು ಋಷಿಗಂಗಾ ನದಿಗಳ ಸಂಗಮ ಸ್ಥಳದಲ್ಲಿರುವ ಡ್ಯಾಮ್ ಸಂಪೂರ್ಣ ನಾಶವಾಗಿದೆ. ಇನ್ನು ಮಲಾರಿ ಕಣಿವೆಯ ಪ್ರವೇಶದ್ವಾರ ಮತ್ತು ತಪೋವನ್ ಬಳಿಯಿದ್ದ, ಎರಡು ಸೇತುವೆಗಳು ಕೂಡ ಕೊಚ್ಚಿಹೋಗಿವೆ. ಜೋಶಿಮಠ ಮತ್ತು ತಪೋವನ್ ನಡುವಿನ ಮುಖ್ಯ ರಸ್ತೆ ಹಾಗೇ ಇದ್ದು, ಕಣಿವೆಯಲ್ಲಿನ ನಿರ್ಮಾಣ ಕಾರ್ಯಗಳು ಮತ್ತು ಗುಡಿಸಲುಗಳಿಗೆ ಹಾನಿಯಾಗಿದೆ.

ಹಿಮಪಾತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನಾಪತ್ತೆಯಾದವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಈವರೆಗೆ 14 ಮೃತದೇಹಗಳು ಪತ್ತೆಯಾಗಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ 15 ಜನರನ್ನು ರಕ್ಷಣೆ ಮಾಡಲಾಗಿದ್ದು, 14 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕರ್ಣಪ್ರಯಾಗ್ ಮಾರ್ಗದಲ್ಲಿ 7 ಹಾಗೂ ತಪೋವನ ಪ್ರದೇಶದಿಂದ 3 ಮೃತದೇಹಗಳನ್ನು ಹೊರತೆಗೆಯಲಾಗಿದೆ.

ತಪೋವನದ ಸುರಂಗದಲ್ಲಿ ಸಿಲುಕಿದ್ದ 12 ಜನರನ್ನು ರಕ್ಷಿಸಲಾಗಿದೆ. ಈವರೆಗೆ ಒಟ್ಟು 30 ಜನರನ್ನು ರಕ್ಷಿಸಲಾಗಿದೆ. ರೈನಿ ವಿದ್ಯುತ್ ಯೋಜನೆ ಸಂಪೂರ್ಣ ಹಾನಿಯಾಗಿದ್ದು, ಸುರಂಗಗಳ ಅವಶೇಷಗಳಡಿಯಲ್ಲಿ ಹಲವರು ಸಿಲುಕಿಕೊಂಡಿದ್ದಾರೆ. 170 ಜನರು ಕಣ್ಮರೆಯಾಗಿರುವ ಬಗ್ಗೆ ಮಾಹಿತಿಯಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಚಮೋಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

Share.

Leave A Reply