ಬೆಂಗಳೂರು: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೋಟ್ಯಂತರ ಜನರು ಪಾಲ್ಗೊಂಡಿದ್ದರು. ಬದ್ಧತೆ ಹೋರಾಟದಿಂದ ಅತಿಶಕ್ತ ಬ್ರಿಟಿಷ್ ಸಾಮ್ರಾಜ್ಯವನ್ನು ಮಣಿಸಬಹುದು ಎಂಬುದನ್ನು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸಾಧಿಸಿ ತೋರಿಸಿದರು. ಬಹುತೇಕ ಹೋರಾಟಗಾರರು ಅನಾಮಧೇಯರಾಗಿಯೇ ಉಳಿದರು. ಅಂಥ ಅನಾಮಧೇಯ ಹೋರಾಟಗಾರರಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಮರ್ಪಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಅಹಿಂಸೆಯ ಮಾರ್ಗದ ಮೂಲಕ ಸ್ವಾತಂತ್ರ್ಯ ಪಡೆಯಬಹುದು ಎಂಬುದನ್ನು ಮಹಾತ್ಮಾ ಗಾಂಧೀಜಿ ಸಾಧಿಸಿ ತೋರಿಸಿದರು. ದೇಶದ ಆಂತರಿಕ ಭದ್ರತೆಗೆ ನಿಂತಿರುವ ಪೊಲೀಸರಿಗೆ ನಮನ. ದೇಶದ ಅಭಿವೃದ್ಧಿಗೆ ಅನೇಕರ ಕೊಡುಗೆ ಇದೆ. ವಿಜ್ಞಾನಿಗಳು, ರೈತರು, ಕೂಲಿಕಾರ್ಮಿಕರಿಗೆ ನನ್ನ ನಮನ ಎಂದು ಹೇಳಿದರು.
ಸ್ವಾತಂತ್ರ್ಯೋತ್ಸದ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಬೊಮ್ಮಾಯಿ ನೆನಪಿಸಿಕೊಂಡರು. ನಮ್ಮ ನಾಯಕರು, ಯಡಿಯೂರಪ್ಪನವರು. ಅವರ ದಕ್ಷ ನಾಯಕತ್ವ ಹಾಗೂ ಮಾರ್ಗದರ್ಶನದಲ್ಲಿ ಕೊವೀಡ್ ಅನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಅಮೃತ ಮಹೋತ್ಸವದ ಯೋಜನೆ ಗಳನ್ನು ಹಿಂದಿನ ಸ್ವಾತಂತ್ರ್ಯ ಸಂದರ್ಭದಲ್ಲಿ ಇದೇ ವೇದಿಕೆ ಮೇಲೆ ನಿಂತು ಘೋಷಣೆ ಮಾಡಿದ್ದೆ. ಇವಾಗ ಅದೆಲ್ಲವನ್ನು ಮಾಡಿ ಮುಗಿಸಿದ್ದೇವೆ ಎಂದು ನುಡಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಹಲವು ಹೊಸ ಯೋಜನೆಗಳನ್ನು ಬೊಮ್ಮಾಯಿ ಘೋಷಿಸಿದರು. ಸ್ವಚ್ಛತೆ, ಪೌಷ್ಟಿಕತೆ ಕಾಪಾಡಲು, ರೈತರು, ಶ್ರಮಿಕರ, ಅಭ್ಯುದಯಕ್ಕಾಗಿ ಹಾಗು ಕೆಚ್ಚೆದೆಯ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ಕೆಲವು ಕೊಡುಗೆ ನೀಡಲು ಸರ್ಕಾರ ತೀರ್ಮಾನಿದೆ ಎಂದರು. ರಾಜ್ಯದ ಎಲ್ಲ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಸಂಪೂರ್ಣವಾಗಿ ಶೌಚಾಲಯಗಳ ನಿರ್ಮಾಣ ರೂ. 250 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿ ಗಳು, ಭಜಂತ್ರಿ ಬುಟ್ಟಿ ಹೆಣೆಯುವವರು, ವಿಶ್ವಕರ್ಮರು, ಮೇದರು ಸೇರಿದಂತೆ ಇತರ ಕುಶಲಕರ್ಮಿಗಳಿಗೆ ತಲಾ ರೂ. 50 ಸಾವಿರ ಸಾಲದ ಸಹಾಯಧನ ಯೋಜನೆ ಕೊಡುತ್ತೇವೆ ಎಂದರು.
ರೈತರ ವಿದ್ಯಾನಿಧಿ ಯೋಜನೆಯ ಸೌಲಭ್ಯವನ್ನು ವಿಸ್ತರಿಸುತ್ತೇವೆ. ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ಯೋಜನೆ ವಿಸ್ತರಿಸುತ್ತೇವೆ. ರಾಜ್ಯದಲ್ಲಿ ಹೊಸದಾಗಿ 4050 ಅಂಗನವಾಡಿ ತೆರೆಯಲಾಗುವುದು. ಆ ಮೂಲಕ 16 ಲಕ್ಷ ಕುಟುಂಬಗಳಿಗೆ ಪೌಷ್ಟಿಕ ಆಹಾರ ಒದಗಿಸುತ್ತೇವೆ. ಪೂರ್ವ ಶಿಕ್ಷಣ ನೀಡಲು ಅವಕಾಶ ಕಲ್ಪಿಸುತ್ತೇವೆ. 8100 ಮಹಿಳೆಯರಿಗೂ ಇದರಿಂದ ಉದ್ಯೋಗವಕಾಶ ದೊರೆಯಲಿದೆ. ಕರ್ತವ್ಯ ನಿರತ ಸೈನಿಕ ಮೃತಪಟ್ಟರೆ, ಆ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ,ರೂ. 25 ಲಕ್ಷ ಪರಿಹಾರ ಕೊಡುತ್ತೇವೆ ಎಂದು ಘೋಷಿಸಿದರು.

1 Comment
Hello, Neat post. There is a problem with your web site in web explorer, might check this?K IE nonetheless is the marketplace leader and a big component of other folks will omit your fantastic writing due to this problem.