ಬೆಳಗಾವಿ: ಉತ್ತರ ಕರ್ನಾಟಕದ ಸುವರ್ಣ ಸೌಧದಲ್ಲಿ ದಿನಗೂಲಿ ಕೆಲಸಕ್ಕೆ ಹೋಗಿದ್ದ ಮಹಿಳೆಯೊಬ್ಬರು ಮೆಟ್ಟಿಲ ಮೇಲೆ ಶಾವಿಗೆ ಒಣಗಿಸಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಬಡ ಮಹಿಳೆಯ ಮೇಲೆ ಪ್ರತಾಪ ತೋರಿಸಿದ ಅಧಿಕಾರಿಗಳು ಮಲ್ಲವ್ವಳನ್ನು ಕೆಲಸದಿಂದ ಹೊರಗೆ ಹಾಕಿದ್ರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳೀಯ ಗುತ್ತಿಗೆದಾರನಿಗೆ ನೋಟಿಸ್ ಕೊಟ್ಟಿದ್ದರು. ಗುತ್ತಿಗೇದಾರ ಮಲ್ಲವ್ವಗೆ ಕೆಲಸಕ್ಕೆ ಬರಬೇಡಿ ಎಂದು ಹೇಳಿ ಕಳಿಸಿದ್ದರು.

ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಮಲ್ಲವ್ವಗೆ ಮರಳಿ ಕೆಲಸ ನೀಡಿದ್ದು, ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದೆ. ಕೊಂಡಸಕೊಪ್ಪ ಗ್ರಾಮದಲ್ಲಿ ಕೇವಲ 4- 6 ಅಡಿಯ ಪುಟ್ಟ ಮನೆಯಲ್ಲಿ ವಾಸವಿರೋ ಮಲ್ಲಮ್ಮ, ದಿನಗೂಲಿ ನಂಬಿಯೇ ಜೀವನ ನಡೆಸುತ್ತಿದ್ದಾರೆ.
2007 ರಿಂದ ಸುವರ್ಣ ಸೌಧದಲ್ಲಿ ದಿನಗೂಲಿ ಆದಾರದ ಮೇಲೆ ಕೆಲಸ,ಕಸ, ನೆಲ ಒರಿಸುವ ಕೆಲಸ ಮಾಡುತ್ತಿದ್ದ ಮಲ್ಲಮ್ಮ ಮೊದಲು ಕೂಲಿ ಕಮ್ಮಿ ಇತ್ತು, ಈಗ ದಿನಕ್ಕೆ 200 ರೂಪಾಯಿ ಆಗಿದೆ. 20ಕ್ಕೂ ಹೆಚ್ಚು ಜನ ಮಹಿಳೆಯರು ಕೆಲಸ ಮಾಡುತ್ತೇವೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಮಲ್ಲಮ್ಮಗೆ ಕೆಲಸಕ್ಕೆ ಬರಬೇಡಿ ಎಂದು ಗುತ್ತಿಗೇದಾರ ಹೇಳಿದ್ದಾರೆ. ಮೊನ್ನೆ ನಮ್ಮ ಸಂಬಂಧಿಕರು ಶಾವಿಗೆ ತಂದು ಕೊಟ್ಟಿದ್ದರು. ಚೀಲದಲ್ಲಿ ಶಾವಿಗೆ ಇಟ್ಟಿದ್ದೆ, ಬಾಟಲಿಯಲ್ಲಿ ಇದ್ದ ನೀರು ಬಿತ್ತು. ಒದ್ದೆಯಾಗಿದ್ದ ಶಾವಿಗೆಯನ್ನು ಮೆಟ್ಟಿಲ ಮೇಲೆ ಒಣಗಿಸಿದೆ. ಊಟಕ್ಕೆ ಬಂದ ಬಳಿಕ ಗುತ್ತಿಗೇದಾರ ಬೈದ್ರು ತೆಗೆದು ಇಟ್ಟು ಬಿಟ್ಟೆ, ನಂತರ ನಾಲ್ಕು ದಿನ ಕೆಲಸಕ್ಕೆ ಬರಬೇಡ ಅಂದ್ರು ಇನ್ನೂ ಕೆಲಸಕ್ಕೆ ವಾಪಸ್ ತೆಗೆದುಕೊಳ್ಳುವ ಬಗ್ಗೆ ಹೇಳಿಲ್ಲ. ಬರೀ ನೋಡೊಣ ಎನ್ನುವ ಭರವಸೆ ನೀಡಿದ್ದಾರೆ ಅಷ್ಟೇ ಎಂದು ಮಲ್ಲವ್ವ ಹೇಳಿದರು.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಪ್ರಕರಣ ಬಗ್ಗೆ ಗುತ್ತಿಗೇದಾರಿಗೆ ನೋಟಿಸ್ ನೀಡಲಾಗಿತ್ತು. ಬಳಿಕ ಅವರ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಬೇರೆ ಕಡೆ ಕಳುಹಿಸಲಾಗಿತ್ತು. ಇಂದು ಅಥವಾ ನಾಳೆಯಿಂದಲೇ ಮಲ್ಲವ್ವ ಕೆಲಸಕ್ಕೆ ಹಾಜರು, ಅವರ ಸಂಬಳವನ್ನು ಯಾವುದೇ ಕಾರಣಕ್ಕು ತಡೆ ಹಿಡಿಯಲ್ಲ. ಮಲ್ಲವ್ವ ಕೊಂಡಸಕೊಪ್ಪ ಗ್ರಾಮದ ಸಂಬಂಧಿಕರ ಮನೆಯಲ್ಲಿ ಇದ್ದಾರೆ. ಅವರಿಗೆ ಮನೆ ನೀಡುವ ಬೇಡಿಕೆ ಸಹ ಇದೆ.ಬಸ್ತವಾಡ ಗ್ರಾಮದಲ್ಲಿ ಜಾಗ ಕೊಟ್ಟು ಮನೆ ನಿರ್ಮಿಸುತ್ತೇವೆ. ಈ ಬಗ್ಗೆ ಈಗಾಗಲೇ ಜಿಪಂ ಸಿಇಓ ಜತಗೆ ಚರ್ಚೆ ನಡೆಸಲಾಗಿದೆ ಎಂದರು.