ಶಿವಮೊಗ್ಗ: ನೆರೆಮನೆಯವನು ಪ್ರೀತಿಸುವಂತೆ ಕಿರುಕುಳ ಕೊಡುತ್ತಿದ್ದ ಹಿನ್ನೆಲೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ವಸವೆ ಗ್ರಾಮದ ನಿವಾಸಿ ಕುಂಟಿಗೆಯ ಪಟೇಲ್ ಈಶ್ವರಪ್ಪ ಗೌಡ ಪುತ್ರಿ ವಿದ್ಯಾಶ್ರೀ (21) ಮೃತ ಯುವತಿ.

ವಿದ್ಯಾಶ್ರೀ ಹೊಸನಗರದ ಕೊಡಚಾದ್ರಿ ಪದವಿ ಕಾಲೇಜಿನಲ್ಲಿ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಳು. ನೆರೆ ಮನೆಯ ಯುವಕ ಶಶಾಂಕ್, ವಿದ್ಯಾಶ್ರೀ ಪ್ರತಿ ನಿತ್ಯ ಕಾಲೇಜಿಗೆ ತೆರಳುವ ವೇಳೆ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ವಿದ್ಯಾಶ್ರೀ ಈ ಕಿರುಕುಳಕ್ಕೆ ಬೇಸತ್ತು ಏಪ್ರಿಲ್ 19 ರಂದು ಕ್ರಿಮಿನಾಶಕ ಸೇವಿಸಿದ್ದಳು. ಈ ಹಿನ್ನೆಲೆ ಪೋಷಕರು ಆಕೆಯನ್ನು ಮಣಿಪಾಲಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ಈ ಸಾವಿಗೆ ಶಶಾಂಕ್ ಕಾರಣ ಆತನನ್ನು ಬಂಧಿಸಿ ಎಂದು ವಿದ್ಯಾಶ್ರೀ ಸಹೋದರ ರಕ್ಷಿತ್ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ಪ್ರಸ್ತುತ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.