ಬೆಂಗಳೂರು: ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಜ.1 ರಿಂದ ಫೆ. 7ರವರೆಗೆ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.

75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಶಿಕ್ಷಣ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ಈ ಆದೇಶ ಮಾಡಿದ್ದು, ಜನವರಿ 26ರಂದು ‘ಸಂಗೀತದೊಂದಿಗೆ ಸೂರ್ಯ ನಮಸ್ಕಾರಕ್ಕೂ ಸೂಚನೆ ನೀಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಬಳಿಕ ಕಾರ್ಯಕ್ರಮದ ಮಾಹಿತಿಯನ್ನು ಇಲಾಖೆಯ ಶೈಕ್ಷಣಿಕ ಶಾಖೆಗೆ ಸಲ್ಲಿಸಬೇಕು ಎಂದು ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
‘ಸೂರ್ಯ ನಮಸ್ಕಾರ‘ ಕಾರ್ಯಕ್ರಮ ಆಯೋಜಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳ ಮುಖ್ಯಸ್ಥರಿಗೆ ಡಿ.16 ರಂದು ಪತ್ರ ಬರೆದು ಸೂಚಿಸಿತ್ತು.
ಕೇಂದ್ರದ ಸೂಚನೆಯಂತೆ ಜ. 1ರಿಂದ ಫೆ. 7ರವರೆಗಿನ ಒಟ್ಟು 38 ದಿನಗಳ ಪೈಕಿ, 21 ದಿನ ಬೆಳಗ್ಗಿನ ಅಸೆಂಬ್ಲಿ ಅವಧಿಯಲ್ಲಿ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡಬೇಕಿದೆ. ಸೂರ್ಯ ನಮಸ್ಕಾರ ಕಾರ್ಯಕ್ರಮ ಮಾಡಿದ ನಂತರ ಶಿಕ್ಷಣ ಇಲಾಖೆಗೆ ಮಾಹಿತಿಯನ್ನು ನೀಡಬೇಕು. ಪ್ರತಿ ದಿನ 13 ಸೂರ್ಯ ನಮಸ್ಕಾರಗಳಂತೆ ಒಟ್ಟು 273 (21 ದಿನಗಳಲ್ಲಿ) ಸೂರ್ಯ ನಮಸ್ಕಾರಗಳನ್ನು ಮಾಡಿದ ವರಿಗೆ ಇ–ಪ್ರಮಾಣಪತ್ರ ನೀಡುವುದಾಗಿ ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್ ತಿಳಿಸಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.