ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಟೂರ್ನಿಯ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲುಂಡಿದೆ. ಧೋನಿ ಪಡೆ 69 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಆರ್‌ಸಿಬಿ ಪರ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ 34 (15), ನಂತರ ಬಂದ ಮ್ಯಾಕ್ಸ್‌ವೆಲ್ 22 (15) ಹೊರತುಪಡಿಸಿ ಇನ್ಯಾರೂ ಉತ್ತಮ ಆಟ ಪ್ರದರ್ಶಿಸಿಲ್ಲ. ಎಬಿಡಿ, ಕೊಹ್ಲಿ ಸಹಿತ ಪ್ರಮುಖ ದಾಂಡಿಗರು 10 ರನ್ ದಾಟದೇ ಔಟ್ ಆಗಿದ್ದಾರೆ. ಈ ಮೂಲಕ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಗೆದ್ದು ಬೀಗಿದೆ. ಚೆನ್ನೈ ಪರ ಜಡೇಜಾ ಬೌಲಿಂಗ್‌ನಲ್ಲೂ ಮಿಂಚಿದ್ದಾರೆ. 4 ಓವರ್‌ಗೆ ಕೇವಲ 13 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಇಮ್ರಾನ್ ತಾಹಿರ್ 2 ವಿಕೆಟ್ ಪಡೆದಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 191 ರನ್ ಕಲೆಹಾಕಿತ್ತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 192 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಚೆನ್ನೈ ಪರ ಡುಪ್ಲೆಸಿಸ್ 50 (41), ಗಾಯಕ್‌ವಾಡ್ 33 (25) ಉತ್ತಮ ಆರಂಭ ನೀಡಿದ್ದರು. ನಂತರ ಬಂದ ರೈನಾ 24, ರಾಯುಡು 14, ಧೋನಿ 3 ಬಾಲ್ ಆಡಿ 2 ರನ್ ದಾಖಲಿಸಿ ಇನ್ನಿಂಗ್ಸ್ ಕಟ್ಟಿದ್ದರು.
ಆರಂಭಿಕ ಎರಡು ವಿಕೆಟ್ ಕುಸಿತದ ಬಳಿಕ ಚೆನ್ನೈ ಅಲ್ಪಮೊತ್ತದ ಟಾರ್ಗೆಟ್ ನೀಡುವ ನಿರೀಕ್ಷೆ ಮೂಡಿಸಿತ್ತು. ಆದರೆ ಅಂತಿಮವಾಗಿ ಜಡೇಜಾ ಅಬ್ಬರಿಸಿದರು. ಜಡೇಜಾ 28 ಬಾಲ್‌ಗೆ 5 ಸಿಕ್ಸರ್, 4 ಬೌಂಡರಿ ಸಹಿತ 62 ರನ್ ಕಲೆಹಾಕಿದ್ದರು. ಆರ್‌ಸಿಬಿ ಪರ ಹರ್ಷಲ್ ಪಟೇಲ್ 3 ವಿಕೆಟ್ ಹಾಗೂ ಚಹಾಲ್ 1 ವಿಕೆಟ್ ಪಡೆದಿದ್ದರು.