ಇತ್ತೀಚಿಗೆ ಮುಗಿದ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ, ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ದೇಶಕ್ಕಾಗಿ ಸ್ಮರಣೀಯ ಚಿನ್ನದ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಜೊತೆಗೆ ಸಿಂಧು ಈ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆಯನ್ನು ಮಾಡಿದ್ದರು. ಆದರೆ ಸಿಂಧು ಈಗ ಈ ಚಿನ್ನದ ಪದಕದ ಗೆಲುವಿನ ಬಾರವನ್ನು ಹೊರಬೇಕಾಗಿದೆ. ಚಿನ್ನ ಗೆಲ್ಲುವ ಯತ್ನದಲ್ಲಿ, ಗಾಯದ ನಡುವೆಯೂ ಸಿಂಧು ಫೈನಲ್ ಆಡಿದ್ದರು. ಆದರೆ ಈಗ ಈ ಗಾಯವು ಗಂಭೀರವಾಗಿದ್ದು, ಈ ಕಾರಣದಿಂದಾಗಿ ಅವರು ಈ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದಾರೆ.
ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್ ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ಆಗಸ್ಟ್ 22 ರಿಂದ ಆಗಸ್ಟ್ 28 ರವರೆಗೆ ನಡೆಯಲಿದ್ದು, ಮಾಜಿ ಮಹಿಳಾ ಸಿಂಗಲ್ಸ್ ಚಾಂಪಿಯನ್ ಸಿಂಧು ಈ ಸ್ಪರ್ಧೆಯಲ್ಲಿ ಬಾಗವಹಿಸಲು ಸಾಧ್ಯವಾಗುವುದಿಲ್ಲ. ಇತ್ತೀಚೆಗಷ್ಟೇ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಳೆ ಸಿಂಧು ಗಾಯಗೊಂಡಿದ್ದರು. ಮಹಿಳಾ ಸಿಂಗಲ್ಸ್‌ನ ಸೆಮಿಫೈನಲ್ ಪಂದ್ಯದ ವೇಳೆ ಸಿಂಧು ಈ ಗಾಯಕ್ಕೆ ಒಳಗಾಗಿದ್ದರು. ಇದರ ಹೊರತಾಗಿಯೂ, ಅವರು ಕಠಿಣ ಪಂದ್ಯದಲ್ಲಿ ಗೆಲುವ ಸಾಧಿಸಿದ್ದರು. ಜೊತೆಗೆ ಆಗಸ್ಟ್ 8 ರಂದು ನಡೆದ ಫೈನಲ್‌ನಲ್ಲಿ ಗಾಯದ ನೋವನ್ನು ಸಹಿಸಿಕೊಂಡು ತನಗೆ ಮತ್ತು ದೇಶಕ್ಕೆ ಸ್ಮರಣೀಯ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಸಿಂಧು ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಅಲ್ಲದೆ ವಿಶ್ವ ಚಾಂಪಿಯನ್‌ಶಿಪ್ ಆರಂಭಕ್ಕೂ ಮೊದಲು ಸಿಂದು ಈ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸ್ಪೋರ್ಟ್‌ಸ್ಟಾರ್ ವರದಿ ಹೇಳಿದೆ. ಸಿಂಧು ಅವರ ಎಡ ಹಿಮ್ಮಡಿಯಲ್ಲಿ ಮೂಳೆ ಮುರಿತವಾಗಿದೆ ಎಂದು ಭಾರತದ ಸ್ಟಾರ್ ಷಟ್ಲರ್ ತಂದೆ ಪಿವಿ ರಾಮಣ್ಣ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಈ ಕಾರಣದಿಂದಾಗಿ, ಅವರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಕೋರ್ಟ್ನಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಸಿಂಧು, ವಿಶ್ರಾಂತಿ ಮತ್ತು ಚೇತರಿಕೆಯತ್ತ ಗಮನ ಹರಿಸಲಿದ್ದು, ಅಕ್ಟೋಬರ್‌ನಲ್ಲಿ ಕೋರ್ಟ್ಗೆ ಮರಳುವ ಸಾಧ್ಯತೆ ಇದೆ ಎಂದು ಅವರ ತಂದೆ ತಿಳಿಸಿದ್ದಾರೆ.
ಸಿಂಧು ವಿಶ್ವ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಭಾರತೀಯ ಆಟಗಾರ್ತಿಯಾಗಿದ್ದಾರೆ. 2019 ರಲ್ಲಿ, ಸಿಂಧು ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸಿಂಧು 2013 ರಿಂದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದು, ಇದುವರೆಗೆ ಅವರು ಒಂದು ಚಿನ್ನ ಸೇರಿದಂತೆ ಒಟ್ಟು 5 ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ ಎರಡು ಬಾರಿ ಬೆಳ್ಳಿ ಹಾಗೂ ಎರಡು ಬಾರಿ ಕಂಚಿನ ಪದಕವನ್ನೂ ಗೆದ್ದಿದ್ದಾರೆ. ಸಿಂಧು ಈ ಬಾರಿ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು. ಇದೀಗ ಅವರ ಅನುಪಸ್ಥಿತಿಯಲ್ಲಿ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸೈನಾ ಹೊರತಾಗಿ ಯುವ ಆಟಗಾರ್ತಿ ಮಾಳವಿಕಾ ಬನ್ಸೋಡ್ ಕೂಡ ಮಹಿಳೆಯರ ಸಿಂಗಲ್ಸ್‌ನಲ್ಲಿ ಗೆಲುವಿಗಾಗಿ ಸೆಣಸಾಡಲಿದ್ದಾರೆ.

1 Comment
I carry on listening to the news broadcast speak about getting free online grant applications so I have been looking around for the best site to get one. Could you advise me please, where could i acquire some?