ಬೆಂಗಳೂರು: ಸ್ಯಾಂಡಲ್‌ವುಡ್ ಪವರ್‌ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಸಾವಿನಿಂದಾಗಿ ಅವರು ನಟಿಸುತ್ತಿದ್ದ ಸಿನಿಮಾಗಳು ಅರ್ಧಕ್ಕೆ ಸ್ಥಗಿತಗೊಂಡಿದೆ.
ಪುನೀತ್ ರಾಜ್‌ಕುಮಾರ್ ನಟಿಸುತ್ತಿದ್ದ ಸಿನಿಮಾಗಳ ಬಜೆಟ್ ಏನಿಲ್ಲವೆಂದರೂ 10 ಕೋಟಿ ರೂಪಾಯಿ ಮೇಲಿರುತ್ತಿತ್ತು ಎನ್ನುತ್ತಾರೆ ಸಿನಿಮಾ ಪಂಡಿತರು. ಅನೌನ್ಸ್ ಆಗಿದ್ದ ಮೂರು ಸಿನಿಮಾ ಸೇರಿ ಒಟ್ಟು ಐದು ಸಿನಿಮಾಗಳು ಅವರ ತೆಕ್ಕೆಯಲ್ಲಿದ್ದವು.

ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಸಿನಿಮಾದ ಶೇ.90ರಷ್ಟು ಚಿತ್ರೀಕರಣ ಮುಗಿದಿತ್ತು. ಪವನ್ ಕುಮಾರ್ ನಿರ್ದೇಶನ ಮಾಡುತ್ತಿದ್ದ ‘ದ್ವಿತ್ವ’ ಸಿನಿಮಾದ ಶೂಟಿಂಗ್ ಆರಂಭವಾಗಬೇಕಿತ್ತು. ‘ಜೇಮ್ಸ್’ ಬಿಗ್ ಬಜೆಟ್ ಸಿನಿಮಾ. 8 ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚಾಗಿದೆ ಎನ್ನಲಾಗಿದೆ. ‘ದ್ವಿತ್ವ’ ಸಿನಿಮಾಗಾಗಿ ಎಲ್ಲ ರೀತಿಯ ತಯಾರಿಯನ್ನು ಚಿತ್ರ ತಂಡ ಮಾಡಿಕೊಂಡಿತ್ತು. ಚಿತ್ರೀಕರಣ ಆರಂಭಕ್ಕೂ ಮುನ್ನ ಈ ರೀತಿ ಆಗಿದೆ.
ಈ ಎರಡು ಸಿನಿಮಾಗಳನ್ನು ಹೊರತುಪಡಿಸಿದರೆ ‘ಪೈಲ್ವಾನ್’ ನಿರ್ದೇಶಕ ಕೃಷ್ಣ ಅವರು ಒಂದು ಸಿನಿಮಾವನ್ನು ಪುನೀತ್‌ಗಾಗಿ ಅನೌನ್ಸ್ ಮಾಡಿದ್ದರು. ಆ ಚಿತ್ರದಲ್ಲಿ ಪುನೀತ್ ‘ರಾ’ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೃಷ್ಣ ತಿಳಿಸಿದ್ದರು. ನೇಪಾಳ, ಬಾಂಗ್ಲಾದಲ್ಲಿ ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದರು. ದಿನಕರ್ ತೂಗುದೀಪ ನಿರ್ದೇಶನದಲ್ಲಿ ಜಯಣ್ಣ ಬ್ಯಾನರ್‌ನಲ್ಲಿ ಮತ್ತೊಂದು ಸಿನಿಮಾ ಅನೌನ್ಸ್ ಆಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ‘ಪೃಥ್ವಿ’ ಖ್ಯಾತಿಯ ನಿರ್ದೇಶಕ ಜೇಕಬ್ ವರ್ಗೀಸ್ ಅವರ ಜತೆ ಸಿನಿಮಾ ಮಾಡುವುದಾಗಿ ಅವರ ಆಪ್ತ ಬಳಗದಲ್ಲಿ ಅಪ್ಪು ಹೇಳಿಕೊಂಡಿದ್ದರು.
ಇದರ ಜತೆಗೆ ತಮ್ಮ ಹೋಮ್ ಬ್ಯಾನರ್‌ನಲ್ಲಿ ಅವರು ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’, ‘ಒನ್ ಕಟ್ ಟು ಕಟ್’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಈ ಮೂರು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಎಲ್ಲವೂ ಸೇರಿ 50 ಕೋಟಿ ರೂ. ಬಂಡವಾಳ ಪುನೀತ್ ಅವರ ಮೇಲಿದೆ.