ವಾಷಿಂಗ್ಟನ್: ಅಮೇರಿಕಾದ ಅಟ್ಲಾಂಟಾ ಮೃಗಾಲಯದಲ್ಲಿರುವ ಗೊರಿಲ್ಲಾಗಳಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.

ಗೊರಿಲ್ಲಾಗಳಲ್ಲಿ ಕೆಲವು ದಿನಗಳಿಂದ ಕೆಮ್ಮು, ನೆಗಡಿ ಮತ್ತು ಹಸಿವಿಲ್ಲದಿರುವಿಕೆ ಮುಂತಾದ ಬದಲಾವಣೆಗಳು ಗೋಚರಿಸಿರುವುದಾಗಿ ಶುಕ್ರವಾರ ಮೃಗಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಿಳಿಸಿದ್ದಾರೆ. ಇನ್ನೂ ಗೋರಿಲ್ಲಾಗಳ ಮಲ, ಮೂಗಿನ ಗಂಟಲಿನ ದ್ರವ ಮಾದರಿಯನ್ನು ಜಾರ್ಜಿಯಾ ವಿಶ್ವವಿದ್ಯಾಲಯದ ಪಶುವೈದ್ಯಕೀಯ ಪ್ರಯೋಗಾಲಯವು ಪರೀಕ್ಷಿಸಿದಾಗ ಗೊರಿಲ್ಲಾಗಳಿಗೆ ಸೋಂಕು ದೃಢಪಟ್ಟಿರುವ ವಿಚಾರ ತಿಳಿದುಬಂದಿದೆ.
ಸದ್ಯ ಈ ಕುರಿತ ಮಾಹಿತಿಯನ್ನು ಮೃಗಾಲಯವು ಏಮ್ಸ್‌ನಲ್ಲಿರುವ ರಾಷ್ಟ್ರೀಯ ಪಶುವೈದ್ಯಕೀಯ ಸೇವಾ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದೆ. ಪ್ರಾಣಿಗಳನ್ನು ನೋಡಿಕೊಳ್ಳುವ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರಿಂದ ಪ್ರಾಣಿಗಳಿಗೂ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಆ ಸಿಬ್ಬಂದಿ ಲಸಿಕೆ ಪಡೆದು ಪ್ರಾಣಿಗಳನ್ನು ನೋಡಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ.
ಇದೀಗ ಮೃಗಾಲಯದಲ್ಲಿರುವ ಎಲ್ಲಾ ಪ್ರಾಣಿಗಳ ಮಾದರಿಗಳನ್ನು ಮೃಗಾಲಯ ಸಿಬ್ಬಂದಿ ಸಂಗ್ರಹಿಸಿ, ಪರೀಕ್ಷೆಸಲು ಕಳುಹಿಸಲಾಗುತ್ತಿದೆ.