ಹೊಸದಿಲ್ಲಿ: ಕಳೆದ ಒಂದೂವರೆ ವರ್ಷದಲ್ಲಿ ಇಡೀ ವಿಶ್ವವೇ ಕೊರೊನಾ ಮಹಾಮಾರಿಯಿಂದ ನಲುಗಿ ಹೋಗಿದೆ. ಸೋಂಕಿನಿಂದ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಯುಎಸ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಸಂಜೆ 6:30ರಲ್ಲಿ (ಭಾರತೀಯ ಕಾಲಮಾನ) ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರಜಾಪ್ರಭುತ್ವದ ತಾಯಿ ಎನಿಸಿಕೊಂಡಿರುವ ಭಾರತದಿಂದ ಬಂದಿದ್ದೇನೆ. ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಆವಿರಾರು ವರ್ಷಗಳ ಇತಿಹಾಸವಿದೆ. ಭಾರತದಲ್ಲಿ ಈ ವರ್ಷ 75ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದೇವೆ. 4ನೇ ಬಾರಿ ವಿಶ್ವ ಸಂಸ್ಥೆಯಲ್ಲಿ ಮಾತನಾಡುತ್ತಿದ್ದೇನೆ. ಏಕಾತ್ಮ ಮಾನವತಾವಾದ ನಮ್ಮ ಮೂಲ ಮಂತ್ರ ಎಂದು ಹೇಳಿದರು.
ಭಾರತ ಅಭಿವೃದ್ಧಿಯಾದರೆ ವಿಶ್ವದ ಅಭಿವೃದ್ಧಿಯಾಗುತ್ತದೆ. ಭಾರತ ಸುಧಾರಣೆಯಾದ್ದರೆ ವಿಶ್ವವೇ ಸುಧಾರಣೆಯಾಗುತ್ತದೆ. ಭಾರತದ ಅಭಿವೃದ್ಧಿಯಿಂದ ವಿಶ್ವದ ಅಭಿವೃದ್ಧಿಗೆ ವೇಗ ಸಿಗುತ್ತದೆ. ಕಲುಷಿತ ನೀರು ಇಡೀ ವಿಶ್ವಕ್ಕೆ ಶಾಪವಾಗಿ ಪರಿಣಮಿಸಿದೆ. ಭಾರತ ಮಾತ್ರವಲ್ಲದೆ ಇಡೀ ಜಗತ್ತನ್ನು ಈ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಬಡ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕುಡಿಯಲು ಯೋಗ್ಯವಾದ ನೀರಿನ ಸಮಸ್ಯೆ ಕಾಡುತ್ತಿದೆ ಎಂದು ಹೇಳಿದ್ದಾರೆ.
ಭಯೋತ್ಪಾದನೆ ರಾಜಕೀಯ ಆಯುಧವಾಗಿ ಬಳಕೆಯಾಗುತ್ತಿದೆ. ಭಯೋತ್ಪಾದಕರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಭಯೋತ್ಪಾದನೆ ಅವರಿಗೇ ಮಾರಕ ಆಗಲಿದೆ. ಆಫ್ಘನ್ ಉಗ್ರರನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಬೇಡಿ. ಆಫ್ಘನ್ ಭೂಮಿ ಉಗ್ರರಿಗೆ ಬಳಕೆಯಾಗಬಾರದು. ಭಯೋತ್ಪಾದನೆ ವಿರುದ್ಧ ಇಡೀ ಜಗತ್ತು ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರಿಕೆ ಎಚ್ಚರಿಕೆ ನೀಡಿದರು.
ಭಯೋತ್ಪಾದನೆ ಇಂದು ವಿಶ್ವಕ್ಕೆ ಕಂಟಕವಾಗಿದೆ. ಭಯೋತ್ಪಾದನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಉಗ್ರರನ್ನು ರಾಜಕೀಯ ದಾಳವಾಗಿ ಬಳಸಲಾಗುತ್ತಿದೆ. ಭಯೋತ್ಸಾದನೆ ಅವರಿಗೂ ತೊಂದರೆ ನೀಡುತ್ತೆ ಎನ್ನುವ ಮೂಲಕ ಉಗ್ರ ಪೋಷಕ ಪಾಕಿಸ್ತಾನಕ್ಕೆ ಮೋದಿ ಟಾಂಗ್ ನೀಡಿದರು.
ಸೇವಾ ಪರಮೋಧರ್ಮ ಎಂಬುದರಲ್ಲಿ ಭಾರತ ನಂಬಿಕೆಯಿಟ್ಟಿದೆ. ಭಾರತದ ವಿಶ್ವದ ಮೊದಲ ಡಿಎನ್‌ಎ ಲಸಿಕೆ ಸಂಶೋಧನೆ ಮಾಡಲಾಗಿದೆ. ಈ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ನೀಡಬಹುದು. ಎಂಆರ್‌ಎನ್‌ಎ ಲಸಿಕೆ ಸಂಶೋಧನೆ ಹಂತಿಮ ಅಂತದಲ್ಲಿದೆ. 43 ಕೋಟಿ ಜನರಿಗೆ ಬ್ಯಾಂಕಿಂಗ್ ವ್ಯವಸ್ಥೆ ನೀಡಿದ್ದೇವೆ. 36 ಕೋಟಿ ಜನರಿಗೆ ವಿಮೆಯನ್ನು ನೀಡಿದ್ದೇವೆ. 50 ಕೋಟಿ ಜನರಿಗೆ ಉಚಿತ ಆರೋಗ್ಯ ಸೇವೆ ನೀಡ್ತಿದ್ದೇವೆ. 3 ಕೋಟಿ ಜನರಿಗೆ ಪಕ್ಕಾ ಮನೆ ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ.
ಹಲವು ಕಾರಣಗಳಿಂದ ಪ್ರಧಾನಿ ಮೋದಿ ಅವರ ಭಾಷಣ ಕುರಿತಂತೆ ಜಾಗತಿಕ ಮಟ್ಟದಲ್ಲಿ ಭಾರೀ ನಿರೀಕ್ಷೆ ಮೂಡಿತ್ತು. ಕೋವಿಡ್ ನಂತರ ಅಂದರೆ, ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ವಿದೇಶಿ ಪ್ರವಾಸ ಕೈಗೊಡಿದ್ದು, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದಾರೆ. ಕೊರೊನಾವೈರಸ್ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುವುದು, ಸಮರ್ಥ ಪುನರ್ನಿರ್ಮಾಣ, ಜಗತ್ತಿನ ಅಗತ್ಯಗಳಿಗೆ ಸ್ಪಂದಿಸುವುದು, ಜನರ ಹಕ್ಕುಗಳನ್ನು ಗೌರವಿಸುವುದು ಮತ್ತು ವಿಶ್ವಸಂಸ್ಥೆಯನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದರು.
ಕಳೆದ ಎರಡು ದಿನಗಳಿಂದ ಸಭೆಗಳು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಮಾತುಕತೆ, ಕ್ವಾಡ್ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಬಳಿಕ ನ್ಯೂಯಾರ್ಕ್ ತಲುಪಿದ್ದರು. ಭಾರತದಲ್ಲಿ ಹೂಡಿಕೆಯನ್ನು ಆಕರ್ಷಿಸಲು 5 ಜಾಗತಿಕ ಸಿಇಒಗಳ ಜೊತೆ ಕೂಡ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಇಂದಿಗೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಮುಕ್ತಾಯವಾಗಲಿದ್ದು, ನಾಳೆ ಭಾರತಕ್ಕೆ ಆಗಮಿಸಲಿದ್ದಾರೆ.